|
ಇದು ಗಣಿತಾಭ್ಯಾಸ ಮಾಡುತ್ತಿರುವ ಪ್ರೌಢಶಾಲೆಯ ಮಕ್ಕಳ ಅಧ್ಯಯನಕ್ಕೆ ಸಹಕಾರಿಯಾಗಿರುವ ಉಚಿತ ವ್ಯ್ವವಸ್ಥೆ.
ಅರ್ಪಣೆ
|
1. ಮನುಕುಲಕ್ಕೆ ಶೂನ್ಯ ಮತ್ತು ದಶಮಾಂಶ ಪದ್ಧತಿಯನ್ನು ಪರಿಚಯಿಸಿದ ಅನಾಮಧೇಯ ಗಣಿತ ಶಾಸ್ತ್ರಜ್ಞರಿಗೆ
2. "ಪೈ" ಬೆಲೆಯನ್ನು ಮೊತ್ತ ಮೊದಲಿಗೆ 4 ದಶಮಾಂಶ ಸ್ಥಾನಗಳಿಗೆ ಕಂಡುಹಿಡಿದು, ಅದೊಂದು ಅಭಾಗಲಬ್ಧ ಸಂಖ್ಯೆಯೆಂದು ಸಾರಿದ ಗಣಿತ ವಿದ್ವಾಂಸ ಆರ್ಯಭಟರಿಗೆ(ಕ್ರಿ.ಶ 476)
3. ತಮ್ಮ ಮೇರು ಗ್ರಂಥ "ಸಿದ್ಧಾಂತಶಿರೋಮಣಿ" ಯಲ್ಲಿ ಅಂಕಗಣಿತ, ಬೀಜಗಣಿತ, ರೇಖಾಗಣಿತ, ಖಗೋಳಶಾಸ್ತ್ರಗಳನ್ನು ಕ್ರಮವಾಗಿ 'ಲೀಲಾವತಿ', 'ಬೀಜಗಣಿತ', 'ಗೋಳಾಧ್ಯಾಯ' ಮತ್ತು 'ಗೃಹಗಣಿತ' ಎನ್ನುವ ಪುಸ್ತಕಗಳಲ್ಲಿ ವಿವರಿಸಿದ ಕರ್ಣಾಟಕದ ಗಣಿತ ವಿದ್ವಾಂಸ ಭಾಸ್ಕರಾಚಾರ್ಯರಿಗೆ( ಕ್ರಿ ಶ 1160)
(ವಿವರಗಳಿಗೆ ಕ್ಲಿಕ್ಕಿಸಿ)
4.ನನಗೆ ಗಣಿತ ಕಲಿಸಿದ ಅಧ್ಯಾಪಕರುಗಳಿಗೆ
ಕೆಲವರಲ್ಲಿ ಗಣಿತ 'ಕಬ್ಬಿಣದ ಕಡಲೆ' ಎನ್ನುವ ಅಭಿಪ್ರಾಯವಿದೆ. ಆ ಅಭಿಪ್ರಾಯ ಸರಿಯಲ್ಲ. ಕಾಯಿಸಿದಾಗ ಕಬ್ಬಿಣವೂ ಕೂಡ ಮೃದುವಾಗುವಂತೆ, ನಿರಂತರ ಅಭ್ಯಾಸದಿಂದ ಗಣಿತವೂ ಕೂಡ ಸುಲಭವಾಗುತ್ತದೆ.
ಶಾಲಾ ವಿದ್ಯಾರ್ಥಿಗಳಿರಲಿ, ಮನೆಯಲ್ಲಿಯೇ ಕುಳಿತು ಸ್ವತಂತ್ರವಾಗಿ ಅಭ್ಯಾಸ ಮಾಡಿ ಪರೀಕ್ಷೆಗೆ ಖಾಸಗಿಯಾಗಿ ಹಾಜರಾಗ ಬಯಸುವವರಿರಲಿ, ಅವರಿಗೆ ಗಣಿತ ಕಲಿಕೆ ಸುಲಭಗೊಳಿಸಲು ಶ್ರೀಯುತ ಸೋಮಯಾಜಿಯವರು ದಾರಿಯೊಂದನ್ನು ಹುಡುಕಿದ್ದಾರೆ. ಅದೇ ತರಗತಿ 8,9,10 ರ ಗಣಿತ ಪಠ್ಯವಸ್ತುವಿಗೆ ಸಂಬಂಧಿಸಿದ ವೆಬ್ ಸೈಟ್, ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ಈ ವೆಬ್ ಸೈಟ್ ಮೂಲಕ ಉಚಿತವಾಗಿ ಪಾಠಗಳನ್ನು ಬಿತ್ತರಿಸಿ ಇದರ ಪ್ರಯೋಜನ ಅನೇಕರಿಗೆ ಆಗುವಂತೆ ಮಾಡಿದ ಹೆಚ್ಚುಗಾರಿಕೆ ಅವರದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಅದರ ಪ್ರಯೋಜನ ಸಿಗುವಂತೆ ಮಾಡುವ ಹಂಬಲದಿಂದ ಆಂಗ್ಲ ಭಾಷೆಯಲ್ಲಿರುವ ಆ ಪಾಠಗಳನ್ನು ಅವರು ಕನ್ನಡದಲ್ಲಿ ಅನುವಾದಿಸಬಯಸಿದರು. ಆ ಕೆಲಸ ನನ್ನಿಂದಾಗಬೇಕೆಂದು ಕೇಳಿಕೊಂಡಾಗ, ಗಣಿತದ ಮೇಲಿನ ಅಭಿಮಾನದಿಂದ, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾನು ಸಂತೋಷದಿಂದ ಒಪ್ಪಿ ಅದನ್ನು ಮಾಡಿದೆ. ಅದರಿಂದಾಗಿ ಅನೇಕರಿಗೆ ಉಪಯೋಗವಾಗುವಂತಾದಲ್ಲಿ ಅವರ ಉದ್ದೇಶವೂ, ನನ್ನ ಪ್ರಯತ್ನವೂ ಸಾರ್ಥಕ.
ಈ ಪಾಠಗಳಲ್ಲಿ ಪ್ರತೀ ವಿಷಯವನ್ನೂ ವಿವರವಾಗಿ ಚರ್ಚಿಸಲಾಗಿದೆ. ಆ ವಿವರ ಮಾರ್ಗದರ್ಶಿ(ಗೈಡ್) ಯಲ್ಲಿರುವಂತೆ ಇರದೆ ನಿಜವಾದ ಪಾಠದಲ್ಲಿರುವಂತಿದೆ. ಹಾಗಾಗಿ ಕಂಪ್ಯೂಟರ್ ನಲ್ಲಿ ಈ ಪಾಠಗಳನ್ನು ನೋಡುತ್ತಿರುವಾಗ ವಿದ್ಯಾರ್ಥಿಗೆ ತಾನೊಂದು ಗಣಿತ ತರಗತಿಯಲ್ಲಿ ಇದ್ದೇನೆ ಎಂದು ಅನಿಸದಿರದು. ಅಷ್ಟು ಚೆನ್ನಾಗಿ ಇಲ್ಲಿ ಗಣಿತ ವಿಚಾರಗಳನ್ನು ವಿವರಿಸಲಾಗಿದೆ. ಹಲವು ಲೆಕ್ಕಗಳನ್ನು ಮಾಡುವ ಸುಲಭ ವಿಧಾನಗಳನ್ನೂ ಇಲ್ಲಿ ತಿಳಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ.
ಅಂತೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು, ಗಣಿತದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಅಂಕಗಳನ್ನು ಗಳಿಸುವಂತಾಗಲಿ ಎಂಬುದೇ ನನ್ನ ಹಾರೈಕೆ.
ಪಿ ವಿಶ್ವೇಶರ ಹಂದೆ
ಬಿ ಎಸ್ ಸಿ, ಬಿ ಎಡ್
ಸಹಾಯಕ ಅಧ್ಯಾಪಕ
ವಿವೇಕ ಪದವಿ ಪೂರ್ವ ವಿದ್ಯಾಲಯ
ಕೋಟ(ಉಡುಪಿ ಜಿಲ್ಲೆ)
|
|
|