4.11 ದಾಸ್ತಾನು ಮತ್ತು ಪಾಲುಗಳು (Stocks and Shares):  

 

ಪೀಠಿಕೆ:

ಯವುದೇ ರೀತಿಯ ವಾಣಿಜ್ಯ  ವ್ಯವಹಾರಗಳನ್ನು ಮಾಡಲು ಕಾನೂನು ರೀತ್ಯಾ ಒಂದು ಸಂಸ್ಥೆ ಸ್ಥಾಪಿತವಾಗಬೇಕು:

ಉದಾ: ವಸ್ತುಗಳ(ಟಿ.ವಿ., ಸಾಬೂನು, ಆಹಾರ . . .) ತಯಾರಿ, ಸೈಕಲ್, ಮೋಟಾರು ವಾಹನಗಳ ಮಾರಾಟ. ಸಂಸ್ಥೆಯನ್ನು ಹುಟ್ಟುಹಾಕಲು  ಮೊದಲಿಗೆ ಏನೆಲ್ಲ ಬೇಕು?

 

1.        ಹಣ.

2.       ಆ ಸಂಸ್ಥೆಯಲ್ಲಿ ಹಣ ಹೂಡುವವರು, ಅವರ ವಿವರ...

3.       ವಾಣಿಜ್ಯ ವ್ಯವಹಾರ ಮಾಡುವ ಕಂಪೆನಿಯ ಹೆಸರು, ನಿಯಮಗಳು . . .

 

ಒಂದು ಕಂಪೆನಿಯು ಭಾರತದಲ್ಲಿ ಕಾರ್ಯಾರಂಭ ಮಾಡುವ ಮುಂಚೆ ಭಾರತೀಯ ಸಂಸ್ಥೆ ಕಾಯಿದೆ 1956ರ ಅಧೀನದಲ್ಲಿ ಸಂಸ್ಥೆಯ ನೋಂದಣಿ ಆಗಬೇಕು. ನೋಂದಣಿ ಆದ ನಂತರ ಕಂಪೆನಿಯು ಕಾರ್ಯಾರಂಭ ಮಾಡಬಹುದು.

 

ಒಂದು ಕಂಪೆನಿ ಸ್ಥಾಪಿಸಲು ಹಣ ಎಲ್ಲಿಂದ ಬರುತ್ತದೆ?

ಕಂಪೆನಿ ಸ್ಥಾಪಿಸಿದವರು ಮುಂಚೆ ಹಣ ಹಾಕದೇ ಯಾರಾದರೂ ಅದಕ್ಕೆ ಹಣ ಕೊಡುತ್ತಾರೆಯೇ? ಇಲ್ಲ.

ಕಂಪೆನಿ ಸ್ಥಾಪಿಸಿದವರು ಹಣ ಹಾಕಿ ಸ್ಥಾಪಿಸಿ ವ್ಯವಹಾರ ನಡೆಸಿದ ಮೇಲೆಯೇ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಬೇಕಾದ ಹೆಚ್ಚಿನ ಹಣವನ್ನು ಒದಗಿಸುತ್ತವೆ. ಆ ನಂತರ ಬೇಕಾದರೆ, ಸ್ನೇಹಿತರಿಂದ/ ಬಂಧು ಬಳಗದವರಿಂದ/ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಬಹುದು.

 

ಮೊದಲು ಹಣ ಹಾಕಿ ಸಂಸ್ಥೆಯನ್ನು ಸ್ಥಾಪಿಸಿದವರೇ ಅದರ ಮಾಲೀಕರು ಅಥವಾ ಪಾಲುದಾರರು.

ಈಗ ಕಂಪೆನಿಗೆ ಸಂಬಂಧ ಪಟ್ಟ ಕೆಲವು ಪದಗಳನ್ನು ತಿಳಿಯುವಾ.

 

ಒಂದು ಜಂಟಿ ದಾಸ್ತಾನು ಸಂಸ್ಥೆಯು (Joint stock company) ಭಾರತೀಯ ಸಂಸ್ಥೆ ಕಾಯಿದೆ 1956ರ ವಿಧಿಯನ್ವಯ ಸ್ಥಾಪಿತವಾದ ಒಂದು ಸಂಸ್ಥೆ (ಕಂಪೆನಿ)ಯಾಗಿದೆ. ಇದು ಸ್ಥಾಪನೆಯಾದ ನಂತರ ಭಾರತೀಯ ಆದಾಯ ತೆರಿಗೆ ಕಾನೂನು ಮತ್ತಿತರ ಕಾನೂನುಗಳಿಗೆ ಅದು ಬದ್ಧವಾಗಿರತಕ್ಕದ್ದು.

 

ಕಂಪೆನಿಯು ಸ್ಥಾಪಿತವಾಗಿ ಕಾರ್ಯ ನಿರ್ವಹಿಸುವಂತಾಗಲು ಸ್ಥಾಪಕರು ಮತ್ತು ಸಾರ್ವಜನಿಕರು ನೀಡಿದ ಹಣವು ಪಾಲು ಬಂಡವಾಳ (Share capital) ಆಗಿರುತ್ತದೆ. ಪಾಲು ಬಂಡವಾಳವು ಕೆಲವು ಲಕ್ಷಗಳಿಂದ ಕೆಲವು ಕೋಟಿ ರೂಪಾಯಿಗಳವರೆಗೂ ಇರಬಹುದು. ಸಂಸ್ಧೆಗೆ ಬೇಕಾದ ಒಟ್ಟು ಬಂಡವಾಳದ ಮೊಬಲಗನ್ನು ಅನೇಕ ಸಣ್ಣ, ಸಮನಾದ ಮುಖ ಬೆಲೆಯಾಗಿ ವಿಭಾಗಿಸುತ್ತಾರೆ. ಪ್ರತಿ ಘಟಕವನ್ನು ಒಂದು ಪಾಲು (ಶೇರು) ಎಂದು ಕರೆಯುತ್ತಾರೆ. ಯಾವುದೇ ಸಂಸ್ಥೆಯ ಇಂತಹ ಪಾಲುಗಳನ್ನು ಹೊಂದಿರುವವರನ್ನು ಆ ಸಂಸ್ಥೆಯ ಪಾಲುದಾರ (Share holder) ಎನ್ನುತ್ತೇವೆ.

 

ಒಂದು ಸಂಸ್ಥೆಯ ಪಾಲು ಬಂಡವಾಳವು ರೂ.1,00,000 ಆದರೆ ಅದನ್ನು ಈ ಕೆಳಗಿನಂತೆ ವಿಭಾಗಿಸಬಹುದು:-

 

·         1 ರೂ. ಮುಖಬೆಲೆಯ     1 ಲಕ್ಷ   ಪಾಲುಗಳು. (1,00,000 =  1,00,000 *1     )

·         5 ರೂ. ಮುಖಬೆಲೆಯ    20,000 ಪಾಲುಗಳು. (1,00,000 =   20,000    *5    )

·         10 ರೂ. ಮುಖಬೆಲೆಯ   10,000 ಪಾಲುಗಳು. (1,00,000 =   10,000   *10   )

·         100 ರೂ. ಮುಖಬೆಲೆಯ  1000   ಪಾಲುಗಳು. (1,00,000 =   1,000     *100 )

 

ಪಾಲು ಬಂಡವಾಳದ ಶೇರುಗಳ ವಿಭಜನೆ ಹೇಗೇ ಇದ್ದರೂ  ಪಾಲು ಬಂಡವಾಳ = ಶೇರುಗಳ ಸಂಖ್ಯೆ* ಪ್ರತಿ ಶೇರಿನ ಮುಖಬೆಲೆ ಎಂದು ಆಗಿರುತ್ತದೆ.

 

ಒಂದು ಕಂಪನಿಯು ಬ್ಯಾಂಕ್ ಆಗಿಲ್ಲದೇ ಇರುವುದರಿಂದ, ಸಾರ್ವಜನಿಕರು ಇಟ್ಟ ಹಣಕ್ಕೆ ಅದು ಬಡ್ಡಿ ಕೊಡುವುದಿಲ್ಲ. ಹಾಗಾದರೆ ಅದಕ್ಕೆ ಹಣ ನೀಡಿದವರಿಗೆ ಪ್ರತಿಫಲವೇನು? ಕಂಪನಿಯು ಲಾಭ ಗಳಿಸುವವರೆಗೂ ಪಾಲುದಾರರಿಗೆ ಅದರಿಂದ ಯಾವುದೇ ಲಾಭ ಇರುವುದಿಲ್ಲ. ಕಂಪನಿಯು ಲಾಭಗಳಿಸಲು ಆರಂಭಿಸಿದ ನಂತರ ಪಾಲುದಾರರಿಗೆ, ಅವರು ಹಾಕಿದ ಬಂಡವಾಳಕ್ಕನುಗುಣವಾಗಿ ಲಾಭವನ್ನು ಹಂಚುತ್ತಾರೆ. ಈ ರೀತಿ, ಪಾಲುದಾರರಿಗೆ ಹಂಚುವ ಲಾಭವನ್ನು ಡಿವಿಡೆಂಡ್(dividend) ಎಂದು ಕರೆಯುತ್ತಾರೆ. ಈ ಲಾಭಾಂಶವನ್ನು ಅವರ ಪಾಲಿನ ಮುಖಬೆಲೆಯ ಶೇರುಗಳಿಗನುಗುಣವಾಗಿ ಶೇಕಡಾದರದಲ್ಲಿ ಕೊಡುತ್ತಾರೆ. ಬ್ಯಾಂಕಿನಂತೆ ಇಲ್ಲಿ ಯಾವುದೇ ನಿಗದಿತ ದರದ(%) ಲಾಭಾಂಶ ಸಿಗುವುದಿಲ್ಲ. ಕೆಲವು ಕಂಪೆನಿಗಳು ತುಂಬಾ ಲಾಭಗಳಿಸಿದಾಗ 500% ದರದಲ್ಲಿ ಲಾಭಾಂಶ ಹಂಚಿದ್ದೂ ಇದೆ. ಅದೇ ರೀತಿ ಲಾಭಗಳಿಸುತ್ತಿಲ್ಲದ ಕಂಪನಿಗಳಲ್ಲಿ 10-20 ವರ್ಷಗಳವರೆಗೂ ಯಾವುದೇ ಲಾಭಾಂಶ ಹಂಚದೇ ಇರುವುದೂ ಉಂಟು ಮತ್ತು ಮುಚ್ಚಿ ಹೋಗುವುದೂ ಉಂಟು. ಈ ಸಂದರ್ಭದಲ್ಲಿ ಪಾಲುದಾರರು ಕಂಪೆನಿಯಿಂದ ಯಾವುದೇ ಆದಾಯವನ್ನು ಪಡೆಯಲಾರರು.

 

4.11.1. ಪಾಲುಗಳ ವಿಧಗಳು (Category of share holders)

 

1. ‘ಮೊದಲ ಹಕ್ಕಿನ ಪಾಲುದಾರರು (Preference share holders)

ಕಂಪೆನಿಯು ಲಾಭ ಗಳಿಸಿದಾಗ, ಮೊದಲ ಹಕ್ಕಿನ ಪಾಲುದಾರರಿಗೆ ನಿಶ್ಚಿತ ದರದಲ್ಲಿ (ಹೆಚ್ಚು ಇಲ್ಲ,  ಕಡಿಮೆ ಇಲ್ಲ) ಲಾಭಾಂಶವನ್ನು ಹಂಚಿ, ಉಳಿದ ಲಾಭಾಂಶವನ್ನು ಇತರ ಪಾಲುದಾರರಿಗೆ (ಸಾಮಾನ್ಯ ಪಾಲುದಾರರು [Equity share holders]) ಹಂಚುತ್ತಾರೆ. ಅದೇರೀತಿ ಸಂಸ್ಥೆಯನ್ನು ಮುಚ್ಚಬೇಕಾದಾಗ, ಸಂಸ್ಥೆಯ ಸಾಲಗಳನ್ನೆಲ್ಲಾ ತೀರಿಸಿದ ಬಳಿಕ, ಉಳಿದ ಹಣವನ್ನು ಬೇರೆ ಪಾಲುದಾರರಿಗೆ ಹಿಂತಿರುಗಿಸುವ  ಮುಂಚೆ, ಮೊದಲ ಹಕ್ಕಿನ ಪಾಲುದಾರರಿಗೆ ಹಂಚಲಾಗುತ್ತದೆ.

2. ‘ಸಾಮಾನ್ಯ ಪಾಲುದಾರರು (Equity share holders)

ಈ ಪಾಲುದಾರರಿಗೆ ಯಾವುದೇ ರೀತಿಯ ಆದ್ಯತೆ ಇರುವುದಿಲ್ಲ. ಮೊದಲ ಹಕ್ಕಿನ ಪಾಲುದಾರರಿಗೆ ಲಾಭಾಂಶವನ್ನು ನೀಡಿದ ನಂತರವೇ, ಸಾಮಾನ್ಯ ಪಾಲುದಾರರಿಗೆ ಲಾಭಾಂಶ ಹಂಚುತ್ತಾರೆ. ಲಾಭಾಂಶದ ದರ ಸ್ಥಿರವಾಗಿರುವುದಿಲ್ಲ.(ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು.) ಸಂಸ್ಥೆಯನ್ನು ಮುಚ್ಚುವ ಸಂದರ್ಭದಲ್ಲಿ ಬಂಡವಾಳವನ್ನು ಮೊದಲ ಹಕ್ಕಿನ ಪಾಲುದಾರರಿಗೆ ಮರು ಪಾವತಿ ಮಾಡಿದ ನಂತರವೇ ಸಾಮಾನ್ಯ ಪಾಲುದಾರರಿಗೆ ಪಾವತಿ ಮಾಡಲಾಗುತ್ತದೆ.ಈ ರೀತಿಯ ಪಾಲುದಾರರು ಒಂದು ಸಣ್ಣ ಅಪಾಯ (ಕಂಪೆನಿ ಮುಚ್ಚಿದಾಗ ಹಣ ಕಳೆದುಕೊಳ್ಳುವುದು)ವನ್ನು ಎದುರಿಸಿ ಉತ್ತಮ ಲಾಭಾಂಶವನ್ನು ಪಡೆಯಬಹುದು.

 

 

4.11.2. ಶೇರುಗಳನ್ನು (ಪಾಲುಗಳನ್ನು)ಕೊಳ್ಳುವುದು (Buying of shares)

 

1.    ಕೆಲವು ಸಲ ಕಂಪೆನಿಗಳು ಸಾರ್ವಜನಿಕರಿಂದ, ತಮ್ಮ ಸಂಸ್ಥೆಯಲ್ಲಿ ಹಣ ಹೂಡುವಂತೆ ಅರ್ಜಿಗಳನ್ನು ಕರೆಯುತ್ತಾರೆ. ಸಾರ್ವಜನಿಕರು ಅರ್ಜಿಸಲ್ಲಿಸಿ, ಹಣ ಕಟ್ಟಿ ಆ ಸಂಸ್ಧೆಯ ಪಾಲುದಾರರಾಗಬಹುದು..

2.    ಪಾಲುಗಳನ್ನು (ಶೇರುಗಳನ್ನು) ಈಗಾಗಲೇ ಇರುವ ಪಾಲುದಾರರಿಂದಲೂ ಪಡೆಯಬಹುದು. ಇಂತಹ ಸಂದರ್ಭದಲ್ಲಿ ಶೇರುಗಳನ್ನು ಕೊಳ್ಳುವ ಮತ್ತು ಮಾರುವ ವ್ಯವಹಾರ ಮಧ್ಯವರ್ತಿ(middlemen) ಮೂಲಕ ನಡೆಯುವುದು. ಈ ಮಧ್ಯವರ್ತಿಗಳನ್ನು ದಲ್ಲಾಳಿ’ (ಶೇರ್ ಬ್ರೋಕರ್) (share brokers) ಎಂದು ಕರೆಯುತ್ತಾರೆ. ಅವರು ಈ ವ್ಯವಹಾರಕ್ಕೆ ವಿಧಿಸುವ ಶುಲ್ಕವನ್ನು ದಲ್ಲಾಳಿ’ (ಕಮಿಶನ್) ಈ ಕಮಿಶನ್ ಹಣವು ಶೇರಿನ ಮಾರಾಟ/ಕೊಳ್ಳುವ ದರದ ಶೇಕಡಾಂಶದಲ್ಲಿರುತ್ತದೆ.

ಸ್ಟಾಕ್ ವಿನಿಮಯ ಕೇಂದ್ರ (Stock exchange) ಒಂದು ನೊಂದಾಯಿತ ಸಂಸ್ಧೆಯಾಗಿದ್ದು, ಹಲವು ಕಂಪೆನಿಗಳ ಶೇರುಗಳ ಮಾರುವವ ಮತ್ತು ಕೊಳ್ಳುವವರ ಮಧ್ಯೆ ವಿನಿಮಯಕೇಂದ್ರವಾಗಿ ಕೆಲಸ ಮಾಡುತ್ತದೆ. ಬಾಂಬೇ ಸ್ಟಾಕ್ ಎಕ್ಸ್ ಚೇಂಜ್ (BSE) ನ್ಯಾಶನಲ್ ಸ್ಟಾಕ್  ಎಕ್ಸ್ ಚೇಂಜ್ (NSE) ಇವೆರಡು ಸ್ಟಾಕ್ ವಿನಿಮಯ ಕೇಂದ್ರಕ್ಕೆ ಉದಾಹರಣೆಗಳಾಗಿವೆ. ಒಳ್ಳೇ ಲಾಭ ಗಳಿಸುವ/ಹೆಸರು ಗಳಿಸಿರುವ ಕಂಪೆನಿಗಳ ಶೇರುಗಳು ನೊಂದಾಯಿತ ಸ್ಟಾಕ್ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಲ್ಪಟ್ಟಿರುತ್ತದೆ.

ಪ್ರತೀ ಶೇರಿಗೂ ಒಂದು ಮುಖಬೆಲೆ ಇದೆ. ಒಂದು ಕಂಪೆನಿಯು ಉತ್ತಮ ಸ್ಥಿತಿಯಲ್ಲಿದ್ದರೆ, ಅದರ ಶೇರುಗಳನ್ನು ಕೊಳ್ಳಲು ಬಹಳ ಮಂದಿ ಆಸಕ್ತರಿರುತ್ತಾರೆ. ಏಕೆಂದರೆ, ಅಲ್ಲಿ ಲಾಭಾಂಶ ಹೆಚ್ಚು. ಆದರೆ ಆ ಕಂಪೆನಿಯ ಶೇರುಗಳನ್ನು ಮಾರುವವರು ಕಡಿಮೆ. ಮಾರುವವರಿಗಿಂತ ಕೊಳ್ಳುವವರೇ  ಹೆಚ್ಚಿದಾಗ, ಶೇರುಗಳ ಬೆಲೆ ಏರುತ್ತದೆ. ಶೇರುಗಳ ಮಾರಾಟದ ಬೆಲೆಯನ್ನು ಮಾರುಕಟ್ಟೆ ಬೆಲೆ(market price) ಎನ್ನುವರು. ಈ ಮಾರುಕಟ್ಟೆ ಬೆಲೆಯು ದಿನ ದಿನಕ್ಕೆ ಹೆಚ್ಚು/ಕಡಿಮೆ ಯಾಗುತ್ತದೆ. ಕಂಪೆನಿಯು ಲಾಭದಲ್ಲಿದ್ದರೆ ಶೇರುಗಳ ಬೆಲೆ ಜಾಸ್ತಿ ಇರುತ್ತದೆ. (ಪ್ರೀಮಿಯಂ ಶೇರುಗಳು) ಕಂಪೆನಿಯು ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೆ, ಅದರ ಶೇರುಗಳಿಗೆ ಬೇಡಿಕೆ ಕಡಿಮೆಯಾಗಿ, ಮುಖಬೆಲೆಗಿಂತ ಕಡಿಮೆ ಬೆಲೆಗೆ (ನ್ಯೂನ ಬೆಲೆ) (discount) ಶೇರು ಮಾರಾಟವಾಗುತ್ತದೆ.

ಉದಾ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶೇರಿನ ಮುಖ ಬೆಲೆ 5 ರೂ. ಇದ್ದರೂ,ಅದರ ಮಾರುಕಟ್ಟೆ ಬೆಲೆ 100 ರಿಂದ 3000 ರೂ.ಗಳವರೆಗೂ ಇದ್ದಿತ್ತು. ಇನ್ಫೊಸಿಸ್ ಕಂಪೆನಿಯ ಶೇರಿನ ಮುಖಬೆಲೆ 5ರೂ. ಇದ್ದರೂ ಅದರ ಮಾರುಕಟ್ಟೆ ಬೆಲೆ ರೂ  900-2000 ಇದ್ದಿತ್ತು. ಮಾರುಕಟ್ಟೆ ಸ್ಥಿತಿ, ಕಂಪೆನಿಯ ಏಳ್ಗೆಯ ಪ್ರಗತಿ, ದೇಶದ/ವಿದೇಶದ  ಆರ್ಥಿಕ/ಸಾಮಾಜಿಕ ಸ್ಥಿತಿಯನ್ನು ಅವಲಂಬಿಸಿ ಶೇರುಗಳ ಮಾರುಕಟ್ಟೆ ಬೆಲೆ ಏರಿಳಿತವಾಗುತ್ತದೆ.

 

4.11.3. ಸಾಲ ಪತ್ರಗಳು (ಡಿಬೆಂಚರುಗಳು) (Debenentures)

 

ಸಂಸ್ಥೆಯ ಬೆಳವಣಿಗೆಗೆ, ವಿಸ್ತರಣೆಗಳಿಗೆ ಹಣ ಬೇಕಾದಾಗ, ಅವರು ಬ್ಯಾಂಕುಗಳಿಂದ ಹಣವನ್ನು ಸಾಲವಾಗಿ ಪಡೆಯಬಹುದು. ಆಗ ಆ ಸಾಲಕ್ಕೆ ಬ್ಯಾಂಕಿಗೆ ಬಡ್ಡಿ ಕಟ್ಟಬೇಕು. ಇದಕ್ಕೆ ಬದಲಾಗಿ ಸಾರ್ವಜನಿಕರಿಂದ ಗೊತ್ತಾದ ಅವಧಿಗೆ, ನಿಗದಿತ ದರದಲ್ಲಿ ಸಾಲವನ್ನು ಪಡೆಯಬಹುದು. ಈ ಸಾಲಗಳಿಗೆ ನೀಡುವ ದಾಖಲೆ ಪತ್ರವನ್ನು ಡಿಬೆಂಚರುಗಳುಅಥವಾ ಋಣಪತ್ರಗಳುಎನ್ನುವರು.

ಸಾಮಾನ್ಯವಾಗಿ ಈ ಡಿಬೆಂಚರ್ ಸರ್ಟಿಫಿಕೇಟುಗಳ ಬೆಲೆ ರೂ.1000ದ ಗುಣಕಗಳಲ್ಲಿರುತ್ತದೆ. ಕಂಪನಿಯು ಕಾಲ ಕಾಲಕ್ಕೆ 3/6/12 ತಿಂಗಳಿಗೊಮ್ಮೆ ಬಡ್ಡಿಯನ್ನು ಕೊಡುತ್ತಾ ಬರುತ್ತದೆ. ನಿಶ್ಚಿತ ಅವಧಿಯ (5 ವರ್ಷ, 10 ವರ್ಷ …) ನಂತರ ಕಂಪನಿಯು ತಾನು ಸ್ವೀಕರಿಸದ ಡೆಬೆಂಚರ್ ಹಣವನ್ನು ಸಾರ್ವಜನಿಕರಿಗೆ ವಾಪಾಸು ಕೊಡುತ್ತದೆ. ಈ ರೀತಿಯಲ್ಲಿ ಸಾಲ ಪಡೆಯುವುದು ಕಂಪೆನಿಗೆ ಲಾಭದಾಯಕ. ಏಕೆಂದರೆ ಅದು ಬ್ಯಾಂಕಿನವರು ಸಾಲದ ಮೇಲೆವಿಧಿಸುವ ಬಡ್ಡಿಗಿಂತ ಕಡಿಮೆ ಬಡ್ಡಿ ಸಾರ್ವಜನಿಕರಿಗೆ ಕೊಟ್ಟರೆ ಸಾಕಾಗುತ್ತದೆ. ಸಾರ್ವಜನಿಕರಿಗೂ ಇದು ಲಾಭ. ಏಕೆಂದರೆ ಅವರಿಗೆ ಬ್ಯಾಂಕಿನವರು ಕೊಡುವುದಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ ಕಂಪೆನಿಯು ಅಕಸ್ಮಾತ್ ಮುಚ್ಚಿದರೆ ಡಿಬೆಂಚರುದಾರ ಹಣ ಕಳಕೊಳ್ಳುವ ಅಪಾಯವಿದೆ. ಶೇರುಗಳಂತೆ, ಡಿಬೆಂಚರುಗಳನ್ನೂ ಸ್ಟಾಕ್ ವಿನಿಮಯ ಕೇಂದ್ರದಿಂದ ಖರೀದಿ ಮಾಡಬಹುದು. ಅಂತೆಯೇ ಡಿಬೆಂಚರುಗಳಿಗೂ ಮಾರುಕಟ್ಟೆ ಬೆಲೆ ಇದೆ.

 

 

4.11 ಸಮಸ್ಯೆ 1: ರಾಮನು ಒಂದು ಕಂಪೆನಿಯ ರೂ. 25 ರ ಶೇರುಗಳನ್ನು 5ರೂ. ಹೆಚ್ಚು ಕೊಟ್ಟು 200 ಶೇರುಗಳನ್ನು ಖರೀದಿಸುತ್ತಾನೆ. ಕಂಪೆನಿಯು 8% ಲಾಭಾಂಶ ಘೋಷಿಸಿದರೆ, ರಾಮನು ಹೂಡಿದ ಹಣ ಮತ್ತು ಗಳಿಸಿದ ಲಾಭ ಕಂಡು ಹಿಡಿ.

 

ಪರಿಹಾರ:

 

ಒಂದು ಶೇರಿನ ಮುಖ ಬೆಲೆ = 25 ರೂ.

ಒಂದು ಶೇರಿಗೆ ಅಧಿಕ ಬೆಲೆ = 5 ರೂ.

1 ಶೇರಿನ ಮಾರುಕಟ್ಟೆ ಬೆಲೆ = 30 ರೂ. (=25+5)

200 ಶೇರುಗಳ ಒಟ್ಟು ಬೆಲೆ = ಶೇರುಗಳ ಸಂಖ್ಯೆ * 1 ಶೇರಿನ ಬೆಲೆ

  = 200*30 = 6000 ರೂ.

ಶೇರಿಗೆ ಲಾಭಾಂಶದ ದರ = 8%

25 ರೂ. ಮುಖಬೆಲೆಯ 1 ಶೇರಿಗೆ ಸಿಗುವ ಡಿವಿಡೆಂಡ್ = 25*8/100 = 2 ರೂ. (ಗಮನಿಸಿ:ಲಾಭಾಂಶವು ಯಾವಾಗಲೂ ಮುಖಬೆಲೆಗೆ ಕೊಡುವುದೇ ಹೊರತಾಗಿ ಮಾರುಕಟ್ಟೆ ಬೆಲೆಗೆ ಅಲ್ಲ.)

200 ಶೇರುಗಳಿಗೆ ಸಿಗುವ ಡಿವಿಡೆಂಡ್ = ಶೇರುಗಳ ಸಂಖ್ಯೆ * 1 ಶೇರಿಗೆ ಸಿಗುವ ಡಿವಿಡೆಂಡ್

     =200*2 = 400 ರೂ.

ಗಮನಿಸಿ:

 

ಅವನಿಗೆ ದೊರೆತ % ಪ್ರತಿಫಲ (Return %)

= (ಆದಾಯ/ತೊಡಗಿಸಿದ ಹಣ) * 100

= (400/6000)*100 = 6.67%

 

ಕಂಪೆನಿಯು 8% ಲಾಭಾಂಶ ಘೋಷಿಸಿದ್ದರೂ ರಾಮನು ಶೇರಿಗೆ ಹೆಚ್ಚು ಬೆಲೆ ನೀಡಿದುದರಿಂದ ಅವನಿಗೆ ಕೇವಲ 6.67% ಪ್ರತಿಫಲ ದೊರಕಿತು.

 

4.11 ಸಮಸ್ಯೆ 2:  ಒಂದು ಕಂಪೆನಿಯ ಪಾಲು ಬಂಡವಾಳವು 3,00,000ೂ. ಗಳಿವೆ. ಇದನ್ನು 3000 ಶೇರುಗಳನ್ನಾಗಿ ಭಾಗ ಮಾಡಿದೆ. ಒಂದು ವರ್ಷ ಕಂಪೆನಿಯು 56,000ರೂ. ಲಾಭಾಂಶ ನೀಡಿದಾಗ, 36 ಶೇರುಗಳನ್ನು ಹೊಂದಿದ ಪಾಲುದಾರನು ಎಷ್ಟು ಮೊಬಲಗನ್ನು ಪಡೆಯುತ್ತಾನೆ?

 

ಪರಿಹಾರ:

ಒಂದು ಶೇರಿನ ಮುಖಬೆಲೆ = ಪಾಲುಬಂಡವಾಳ÷ ಪಾಲುಗಳ ಸಂಖ್ಯೆ == 100ರೂ.

ಪ್ರತಿ ಶೇರಿಗೆ ಲಾಭಾಂಶ = ಒಟ್ಟು ಲಾಭಾಂಶ ÷ ಶೇರುಗಳ ಸಂಖ್ಯೆ =  = 18.667ರೂ.

36 ಶೇರುಗಳಿಗೆ ಲಾಭಾಂಶ = 36*18.667 = 672ರೂ.

 

 

4.11 ಕಲಿತ ಅಂಶಗಳು

 

 

ಸಂಖ್ಯೆ

ಕಲಿತ ಅಂಶಗಳು

1

ಪಾಲು ಬಂಡವಾಳ, ಮೊದಲ ಹಕ್ಕಿನ ಪಾಲುಗಳು, ಸಾಮಾನ್ಯ ಪಾಲುಗಳು, ಸ್ಟಾಕ್ ವಿನಿಮಯ ಕೇಂದ್ರ, ಮಾರುಕಟ್ಟೆ ಬೆಲೆ, ಲಾಭಾಂಶ, ಸಾಲ ಪತ್ರಗಳು.