ಬ್ಯಾಂಕ್ ಬಗ್ಗೆ

ಕರ್ಣಾಟಕ ಬ್ಯಾಂಕ್ ನಡೆದು ಬಂದ ದಾರಿ


ರಾಷ್ಟ್ರದ ಬ್ಯಾಂಕಿಂಗ್ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. 1906 ರಿಂದ 1945 ಅವಧಿಯಲ್ಲಿ, ವಿವಿಧ ಸ್ತರದ ಸುಮಾರು 22 ಬ್ಯಾಂಕ್ಗಳಿಗೆ ಜನ್ಮನೀಡಿದ ಜಿಲ್ಲೆ ದಕ್ಷಿಣ  ಕನ್ನಡ ಮೊದಲು ಮದ್ರಾಸ್ ಪ್ರಾಂತ್ಯದ ಅಧೀನದಲ್ಲಿದ್ದು ಅನಂತರ ಕಾಸರಗೋಡು ಮತ್ತು ಅಮೀನದೇವಿ ದ್ವೀಪಗಳನ್ನು ಹೊರತುಪಡಿಸಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು. ಜಿಲ್ಲೆಯ ಅಭಿವೃದ್ಧಿಯ ನಕಾಶೆಯಲ್ಲಿ, ಜಿಲ್ಲೆಯ ಜನರಲ್ಲಿ ಜನ್ಮತ: ಮೈದಳೆದಿರುವ ಸಂಶೋಧನಾತ್ಮಕ ಮತ್ತು ಸಾಹಸೀ ಪ್ರವೃತ್ತಿ ಮತ್ತು ಇವರ ಔದ್ಯೋಗಿಕ ಮನೋಭಾವ ಎದ್ದು ಕಾಣುವಂತಹುದು.

ಇಪ್ಪತ್ತನೇ
ಶತಮಾನದ ಆರಂಭವು ಜಿಲ್ಲೆಯಲ್ಲಿ ದೇಶಭಕ್ತಿಯ ಹೊಸ ಹುರುಪು, ಹೊಸ ಕಂಪನ್ನು ಜಿಲ್ಲೆಯ ನೆಲದ ಕಣಕಣದಲ್ಲಿ ಸೂಸಿತು. ಸ್ವದೇಶೀ ಚಳುವಳಿಯ ಹೊಸ ಗಾಳಿ ಜಿಲ್ಲೆಯಲ್ಲಿ ಬಿರುಗಾಳಿಯಂತೆ ಆವರಿಸಿತು. ಅಗಾಧ ಉತ್ಸಾಹದೊಂದಿಗೆ ಅನೇಕ ವ್ಯಾಪಾರಿಗಳು, ಕೃಷಿಕರು, ವೈದ್ಯರು ಹಾಗೂ ವಕೀಲರು ಜಿಲ್ಲೆಯಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಕನಸಿಗೆ ನೀರೆರೆದರು. ಸರಿಸುಮಾರು ಇದೇ ಸಮಯದಲ್ಲಿ ಮಹಾತ್ಮಗಾಂಧೀಜಿಯವರ ಶಿಷ್ಯರಲ್ಲೊಬ್ಬರಾದ ಶ್ರೀ ಕಾರ್ನಾಡು ಸದಾಶಿವರಾಯರು ಜಿಲ್ಲೆಯ ಜನಸಾಮಾನ್ಯರ ಹೃದಯದಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದರು. ರಾಷ್ಟ್ರೀಯತೆಯ ಕಿಡಿ ಪ್ರಾಜ್ವಲ್ಯಮಾನವಾಗುತ್ತಾ ಮುಂದೆ 1924 ಬೆಳಗಾಂ ಕಾಂಗ್ರೆಸ್ ಅಧಿವೇಶನದಲ್ಲಿ ರಾಷ್ಟ್ರಭಕ್ತಿಯ ದೀವಟಿಗೆಯಾಗಿ ಉಜ್ವಲಿಸಿತು.

ಇದೇ ಸಮಯಘಟ್ಟದಲ್ಲಿ ಜಿಲ್ಲೆಯ ರೈತಾಪಿ ವರ್ಗ, ಹೋಟೆಲ್ ಉದ್ಯಮ, ಸಣ್ಣ ವ್ಯಾಪಾರಸ್ಥರು ಇದೇ ಮುಂತಾದ ಅವಶ್ಯಕ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವಂತೆ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಜಿಲ್ಲೆಯ ದ್ರಾವಿಡ ಬ್ರಾಹ್ಮಣ ಸಮುದಾಯದ ಪ್ರಮುಖ ವಕೀಲರು ಮತ್ತು ವ್ಯಾಪಾರಸ್ಥರ ಒಂದು ಗುಂಪು ನಿರ್ಧರಿಸಿತು. ಮದ್ರಾಸ್ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಡಾ. ಯು. ರಾಮರಾವ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ತುಂಬಿದ ಸಭೆಯೊಂದರಲ್ಲಿ ಬ್ಯಾಂಕಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಿರ್ಧಾರವನ್ನು ಫೆಬ್ರವರಿ 18, 1924ರಂದು ಜಿಲ್ಲೆಯ ಕಿರಿಯ ಕಂಪೆನಿ ನೋಂದಣಿ ಅಧಿಕಾರಿಗಳಿಂದ ಸ್ಥಾಪನಾ ದೃಡೀಕರಣ ಪತ್ರ (Certification of Incorporation) ವೊಂದನ್ನು ಪಡೆಯುವ ಮೂಲಕ ಕಾರ್ಯಗತ ಗೊಳಿಸಲಾಯಿತು. ಮಹಾನ್ ಚೇತನಗಳ ಕನಸಿನ ಕೂಸು ಕರ್ಣಾಟಕ ಬ್ಯಾಂಕ್ ಜನ್ಮ ತಾಳಿತು. ಮಹಾನ್ ಚೇತನಗಳ ದೂರದೃಷ್ಟಿ ಎಷ್ಟು ನಿಖರವಾಗಿತ್ತು ಎಂದರೆ, ಮುಂದೆ ಮೈಸೂರು ರಾಜ್ಯಕರ್ನಾಟಕ ರಾಜ್ಯವಾಗುವುದನ್ನು ಅವರು ತಮ್ಮ ಕನಸಿಗೆಕರ್ಣಾಟಕ ಬ್ಯಾಂಕ್ಎಂದು ನಾಮಕರಣ ಮಾಡುವುದರ ಮೂಲಕ ಗ್ರಹಿಸಿದ್ದರು!

ಬ್ಯಾಂಕಿನ ಆರಂಭಿಕ ಬಂಡವಾಳ ರೂ. 20 ಮುಖಬೆಲೆಯ 772 ಶೇರುಗಳನ್ನೊಳಗೊಂಡ ರೂ. 15,440 ಆಗಿತ್ತು. ಕರ್ಣಾಟಕ ಬ್ಯಾಂಕಿನ ಪ್ರಪ್ರಥಮ ಶೇರುದಾರರಾಗಿದ್ದವರು, ಶ್ರೀ ನೆಲ್ಲಿಕಾಯಿ ವೆಂಕಟರಾವ್ (101), ಶ್ರೀ ಪೇಜಾವರ ನಾರಾಯಣಾಚಾರ್ಯ (76), ಶ್ರೀ ಕಲ್ಮಾಡಿ ಲಕ್ಷ್ಮಿನಾರಾಯಣ ರಾವ್ (81), ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ (78), ಶ್ರೀ ಪಾಂಗಾಳ ಸುಬ್ಬರಾವ್ (101), ಶ್ರೀ ಉಡುಪಿ ವೆಂಕಟರಾವ್ (101), ಶ್ರೀ ಶೇಷ ಭಟ್ ಭಿಢೆ (101), ಶ್ರೀ ನರಿಕೊಂಬು ರಾಮರಾವ್ (81), ಶ್ರೀ ಕಕ್ಕುಂಜೆ ಸದಾಶಿವ ಅಡಿಗ (81).

ಒಂಬತ್ತು ಮಹನೀಯರು ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿ ವಿರಾಜಮಾನರಾದರು. ಬ್ಯಾಂಕಿನ ಮುಖ್ಯ ಕೇಂದ್ರ ಸ್ಥಾನ ಮತ್ತು ಮೊದಲ ಶಾಖೆಯಾಗಿ ಶ್ರೀ ಶೇಷ ಭಟ್ ಭಿಢೆಯವರ ಡೊಂಗರಕೇರಿ ಮಂಗಳೂರಿನ ನಿವಾಸ ಗುರುತಿಸಿಕೊಂಡಿತು ( ನಿವಾಸವನ್ನು ಮುಂದೆ 1932ರಲ್ಲಿ ಬ್ಯಾಂಕ್ ರೂ. 9000/-ಕ್ಕೆ ಖರೀದಿಸಿತು). ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಮಂಗಳೂರಿನ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ಹೆಸರು ಮಾಡಿದ್ದ ಮಂಗಳೂರಿನ ಪ್ರಖ್ಯಾತ ವಕೀಲರಾಗಿದ್ದ ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ ಇವರು ಘನತೆಯನ್ನು ತಂದರು. ಹೈಕೋರ್ಟ್ ವಕೀಲರಾದ ಶ್ರೀ ಪಿ. ವಾಸುದೇವರಾಯರು ಬ್ಯಾಂಕಿನ ಮೊದಲ ಕಾನೂನು ಸಲಹೆಗಾರರಾಗಿ ನಿಯುಕ್ತಿಗೊಂಡರು. ಲೆಕ್ಕಪರಿಶೋಧಕರಾಗಿ ಮದ್ರಾಸಿನ ಶ್ರೀ ಎಂ.ಕೆ. ದಾಂಡೇಕರ್ ಹಾಗೂ ಬ್ಯಾಂಕಿನ ಪ್ರಥಮ ಕಾರ್ಯದರ್ಶಿಯಾಗಿ ಪಾಂಗಾಳ ರಾಮಚಂದ್ರರಾಯರು ಆಯ್ಕೆಯಾದರು. ಬ್ಯಾಂಕ್ ತನ್ನ ಮೊದಲ ವ್ಯವಹಾರವನ್ನು ಮೇ 23, 1924ರಂದು ಮಂಗಳೂರಿನ ಡೊಂಗರಕೇರಿಯಲ್ಲಿ ಯಶಸ್ವಿಯಾಗಿ ಪ್ರಾರಂಭಿಸಿತು. ಬ್ಯಾಂಕಿನ ಮೊದಲ ವ್ಯವಸ್ಥಾಪಕರಾಗಿ ಕಲ್ಮಾಡಿ ಗೋಪಾಲಕೃಷ್ಣರಾಯರು ಗುರುತಿಸಿಕೊಳ್ಳುತ್ತಾರೆ.

ಬ್ಯಾಂಕ್ ತನ್ನ ಮೊದಲ ವ್ಯವಹಾರ ವರ್ಷದ ಅಂತ್ಯದಲ್ಲಿ ರೂ. 68,000/- ಠೇವಣಿ ಹಾಗೂ ರೂ. 1,22,000/- ಮುಂಗಡವನ್ನು ದಾಖಲಿಸಿತು. (ಬ್ಯಾಂಕಿನ ಸಿ.ಡಿ. ಅನುಪಾತ ಶೇ 178 ರಷ್ಟು ಎತ್ತರದಲ್ಲಿತ್ತು!). ಸ್ವೀಕೃತ ಪಾಲು ಬಂಡವಾಳ ರೂ. 54,000/- ಮತ್ತು ನಿವ್ವಳ ಲಾಭ ರೂ. 4,000/- ವಾಗಿತ್ತು. ಬ್ಯಾಂಕ್ ತನ್ನ ಮೊದಲ ವ್ಯವಹಾರ ವರ್ಷದ ಅಂತ್ಯಕ್ಕೆ ಶೇರುದಾರರಿಗೆ ಶೇ. 6.25ರಷ್ಟು ಲಾಭಾಂಶವನ್ನು ಘೋಷಿಸಿತು. ಹೊಸ ಶಾಖೆಗಳನ್ನು ತೆರೆಯುವುದು ಸುಲಭ ಸಾಧ್ಯವಾಗಿದ್ದರೂ ಕೂಡ, ಬ್ಯಾಂಕ್ ತನ್ನ ಡೊಂಗರಕೇರಿಯ ಶಾಖೆಯಿಂದಲೇ 1930 ವರೆಗೆ ಕಾರ್ಯಾಚರಿಸಿತು.

1930
ರಲ್ಲಿ ಬ್ಯಾಂಕ್ ತನ್ನ ದ್ವಿತೀಯ ಶಾಖೆಯನ್ನು ಮದ್ರಾಸ್ ಜಾರ್ಜ್ ಟೌನ್ (ಈಗಿನ ತಂಬುಚೆಟ್ಟಿ ಬೀದಿ)ನಲ್ಲಿ ಪ್ರಾರಂಭಿಸಿತು. ಆಗ ಬ್ಯಾಂಕಿನ ಠೇವಣಿ ರೂ. 5,44,000/- ಮತ್ತು ಮುಂಗಡ ರೂ. 5,69,000/- ದಷ್ಟು ಎತ್ತರಕ್ಕೆ ಬೆಳೆದಿತ್ತು (31.12.1929 ಅಂತ್ಯಕ್ಕೆ). ಬ್ಯಾಂಕ್ 1929ರಲ್ಲಿ ರೂ. 16,000/- ನಿವ್ವಳ ಲಾಭವನ್ನು ದಾಖಲಿಸಿ ಶೇರುದಾರರಿಗೆ ಶೇ. 8 ಲಾಭಾಂಶವನ್ನು ಘೋಷಿಸಿತು.

ಹೀಗೆ ಮದ್ರಾಸ್ನಲ್ಲಿ ತನ್ನ ಶಾಖೆಯನ್ನು ತೆರೆಯುವ ಮೂಲಕ, ಅಲ್ಲಿ ತನ್ನ ಶಾಖೆಯನ್ನು ತೆರೆದ ಪ್ರಪ್ರಥಮ ದಕ್ಷಿಣ ಭಾರತೀಯ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ಯಾಂಕ್ ತನ್ನ ಮೂರನೇ ಶಾಖೆಯನ್ನು 1934ರಲ್ಲಿ ಉಡುಪಿಯ ರಥಬೀದಿಯಲ್ಲಿ ಪ್ರಾರಂಭಿಸಿತು. ಬ್ಯಾಂಕ್ ನಾಲ್ಕನೇ ಶಾಖೆ, ಸ್ಥಾಪಕ ನಿರ್ದೇಶಕರಾದ ಕಕ್ಕುಂಜೆ ಸದಾಶಿವ ಅಡಿಗರ ಹುಟ್ಟೂರಾದ ಕುಂದಾಪುರದಲ್ಲಿ 1937ರಲ್ಲಿ ಕಾರ್ಯಾರಂಭಿಸಿತು. 1939 ಇಸವಿಯ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ರೂ. 15.33 ಲಕ್ಷ ಹಾಗೂ ಮುಂಗಡ ರೂ. 14.98 ಲಕ್ಷದ ಮಟ್ಟವನ್ನು ಮುಟ್ಟಿತ್ತು. ಮುಂಗಡದ ಸಿಂಹಪಾಲು ಚಿನ್ನದ ಅಡವಿನ ಸಾಲಕ್ಕೆ ಸಂದಿತ್ತು. ಇದೇ ವರ್ಷದಲ್ಲಿ ಬ್ಯಾಂಕ್ ರೂ. 25,000/- ನಿವ್ವಳ ಲಾಭ ಗಳಿಸಿ, ಶೇ. 8.5 ಲಾಭಾಂಶವನ್ನು ಶೇರುದಾರರಿಗೆ ಹಂಚಿತು.

ಮುಂದಿನ ಏಳು ವರ್ಷಗಳಲ್ಲಿ ಅಂದರೆ 1944ರಲ್ಲಿ ತನ್ನ ಮತ್ತೆರಡು ಶಾಖೆಗಳನ್ನು ಪುತ್ತೂರು ಹಾಗೂ ಕಾರ್ಕಳದಲ್ಲಿ ತೆರೆಯಿತು. ಅವಧಿಯಲ್ಲಿ ಬ್ಯಾಂಕಿನ ಆಡಳಿತ ವರ್ಗ ಮತ್ತು ಕಾರ್ಯಾಚರಣೆಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಲಿಲ್ಲ. ಬ್ಯಾಂಕಿನ ಸಿಬ್ಬಂದಿ ವರ್ಗದಲ್ಲೂ ಹೆಚ್ಚಿನ ಏರುಪೇರು ಅವಧಿಯಲ್ಲಿ ಆಗಿರಲಿಲ್ಲ.

ಬ್ಯಾಂಕಿನ ಇತಿಹಾಸದಲ್ಲಿ 1945ನೇ ಇಸವಿ ಒಂದು ಅವಿಸ್ಮರಣೀಯ ವರ್ಷ. ಇದೇ ವರ್ಷ ಬ್ಯಾಂಕಿನ ಸ್ಥಾಪಕ ನಿರ್ದೇಶಕರಲ್ಲೊಬ್ಬರಾದ ಕಕ್ಕುಂಜೆ ಸದಾಶಿವ ಅಡಿಗರ ಮಗ, 31 ಹರೆಯದ ಕಕ್ಕುಂಜೆ ಸೂರ್ಯನಾರಾಯಣ ಅಡಿಗರು ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾದರು. ಬ್ಯಾಂಕಿನ ಸ್ಥಾಪಕ ನಿರ್ದೇಶಕ ಶ್ರೀ ಕಕ್ಕುಂಜೆ ಸದಾಶಿವ ಅಡಿಗರು ಇದೇ ವರ್ಷ ನಿಧನರಾದರು. ವರ್ಷದ ಅಂತ್ಯದಲ್ಲಿ ದಕ್ಷಿಣ ಕನ್ನಡದಲ್ಲಿನ ಐದು ಶಾಖೆಗಳೂ ಸೇರಿ ಒಟ್ಟು ಏಳು ಶಾಖೆಗಳನ್ನು ಬ್ಯಾಂಕ್ ಹೊಂದಿತ್ತು. ಬ್ಯಾಂಕಿನ ಒಟ್ಟು ಠೇವಣಿ ರೂ. 39.33 ಲಕ್ಷ ಮುಂಗಡ ಸಾಲ ರೂ. 20.81 ಲಕ್ಷ ಹಾಗೂ ನಿವ್ವಳ ಲಾಭ ರೂ. 0.22 ಲಕ್ಷದ ಏರುಗತಿಯನ್ನು ದಾಖಲಿಸಿತು.

ಭಾರತ ದೇಶವು 1947ರಲ್ಲಿ ಸ್ವಾತಂತ್ರ್ಯ ಪಡೆಯುವುದರೊಂದಿಗೆ ದೇಶದಲ್ಲಿ ರಾಜಕೀಯ ಯುಗಾಂತರವಾಯಿತು. ಇದರೊಂದಿಗೆ ದೇಶದ ಸಂಸ್ಥೆಗಳ ಮೇಲೆ ಸ್ವಲ್ಪ ಮಟ್ಟಿನ ಸರಕಾರಿ ನಿಯಂತ್ರಣವೂ ಪ್ರಾರಂಭವಾಯಿತು.

ಬ್ಯಾಂಕ್ ತನ್ನ ರಜತ ಜಯಂತಿ ವರ್ಷವನ್ನು 1949ರಲ್ಲಿ ರೂ. 0.75 ಲಕ್ಷ ನಿವ್ವಳ ಲಾಭ ಮತ್ತು ಶೇರುದಾರರಿಗೆ ಶೇ. 6.25 ಲಾಭಾಂಶ ಘೋಷಣೆಯ ಮೂಲಕ ಸಂಭ್ರಮದಿಂದ ಆಚರಿಸಿತು. 1949ರಲ್ಲಿ ಬ್ಯಾಂಕಿನ ಠೇವಣಿ ರೂ. 55.59ಲಕ್ಷ ಮತ್ತು ಮುಂಗಡ ರೂ. 39.39ಲಕ್ಷವನ್ನು ಮೀರಿತ್ತು ಹಾಗೂ ಬ್ಯಾಂಕ್ ಒಟ್ಟು 9 ಶಾಖೆಗಳನ್ನು ಹೊಂದಿತ್ತು. ಜಿಲ್ಲೆಯ ಹೊರಗಿನ ಶಾಖೆಗಳಲ್ಲಿ 1946ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾದ ಶಾಖೆ ಮತ್ತು 1947ರಲ್ಲಿ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಪ್ರಾರಂಭವಾದ ಶಾಖೆ ಸೇರ್ಪಡೆಯಾದವು.

ಬ್ಯಾಂಕಿನ ಆಡಳಿತದಲ್ಲಿ ಹೆಚ್ಚಿನ ವೃತ್ತಿಪರತೆ ಮತ್ತು ವ್ಯವಹಾರದಲ್ಲಿ ಕುಶಲತೆ ತರುವ ದೃಷ್ಟಿಯಿಂದ, ಆಗ ತಾನೆ ಮದ್ರಾಸಿನ ಮೆ| ಪ್ರೇಸರ್ ಮತ್ತು ರಾಸ್ ಸಂಸ್ಥೆಯಲ್ಲಿ ಕಲಿತು ಲೆಕ್ಕಪರಿಶೋಧಕರಾಗಿ ತೇರ್ಗಡೆಯಾದ ಶ್ರೀ ಕೆ.ಎನ್. ಬಾಸ್ರಿ ಅವರನ್ನು 15-06-1979ರಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನೇಮಿಸಲಾಯಿತು. ಇದೇ ಸಮಯದಲ್ಲಿ ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ರವರು ಬ್ಯಾಂಕಿನ ಒಬ್ಬರೇ ಅಂಶಕಾಲಿಕ ಅಧ್ಯಕ್ಷರಾಗಿದ್ದರು.

ಶ್ರೀ ಬಿ.ಆರ್. ವ್ಯಾಸರಾಯ ಆಚಾರ್ರವರು ತಮ್ಮ 34 ವರ್ಷಗಳ ಸುದೀರ್ಘ ಸೇವೆಯ ನಂತರ ಬ್ಯಾಂಕಿನ ಅಧ್ಯಕ್ಷರಾಗಿ 1958ರಲ್ಲಿ ನಿವೃತ್ತರಾದರು. ಇವರಿಂದ ತೆರವಾದ ಸ್ಥಾನವನ್ನು ತುಂಬಲು 1945ರಿಂದಲೂ ತಮ್ಮ ದಣಿವರಿಯದ ಸೇವೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಕೆ.ಎಸ್.ಎನ್. ಅಡಿಗರಿಗೆ ಹೊರತಾದ ವ್ಯಕ್ತಿ ಬೇರೊಬ್ಬರಿರಲಿಲ್ಲ. ಆದರೆ ಶ್ರೀ ಅಡಿಗರೂ ಕೂಡ, ಬ್ಯಾಂಕಿನ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕಿನ ಅಂಶಕಾಲಿಕ ಅಧ್ಯಕ್ಷರಾದರು. ಹಾಗಾಗಿ ಶ್ರೀ ಕೆ.ಎನ್ ಬಾಸ್ರಿಯವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರೆದರು. ತಮ್ಮ ಯಶಸ್ವೀ ವಕೀಲಿ ವೃತ್ತಿ ಮತ್ತು ರಾಜಕೀಯ ಕೆಲಸಕಾರ್ಯಗಳ ನಡುವೆಯೂ ಅಡಿಗರು ಬ್ಯಾಂಕಿನ ಅದೃಷ್ಟವನ್ನು ಹೊಳಪುಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇವರ ಶ್ರಮದ ಫಲವೋ ಎಂಬಂತೆ ಬ್ಯಾಂಕ್ 1959ರಲ್ಲಿಡಿದರ್ಜೆಯಿಂದಸಿದರ್ಜೆಗೆ ತೇರ್ಗಡೆಯಾಯಿತು. 1960ನೇ ದಶಕದ ಪ್ರಾರಂಭದೊಂದಿಗೆ ಬ್ಯಾಂಕ್, ಹಲವು ಸಣ್ಣ ಬ್ಯಾಂಕ್ಗಳನ್ನು ತನ್ನೊಳಗೆ ಸೇರ್ಪಡೆಗೊಳಿಸಿತು. 1960ರಲ್ಲಿ ಶೃಂಗೇರಿ ಶಾರದಾ ಬ್ಯಾಂಕ್ ಲಿ. ಮತ್ತು 1961 ರಲ್ಲಿ ಚಿತಲ್ದುರ್ಗ ಬ್ಯಾಂಕ್ ಲಿ. ಗಳು ಕರ್ಣಾಟಕ ಬ್ಯಾಂಕ್ನಲ್ಲಿ ವಿಲೀನವಾದವು. ಇದರಲ್ಲಿ ಚಿತಲ್ದುರ್ಗ ಬ್ಯಾಂಕ್ ಲಿ. ಮೈಸೂರು ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಯಾದ (1870) ಪ್ರತಿಷ್ಠಿತ ಬ್ಯಾಂಕ್ ಆಗಿತ್ತು. ಅಂತೆಯೇ ಬ್ಯಾಂಕ್ ಆಫ್ ಕರ್ನಾಟಕ 1966ರಲ್ಲಿ ಕರ್ಣಾಟಕ ಬ್ಯಾಂಕ್ನೊಟ್ಟಿಗೆ ವಿಲೀನಗೊಂಡಿತು.. ಇದೇ ವರ್ಷದಲ್ಲಿ ಬ್ಯಾಂಕಿನ ಪಾವತಿಸಲಾದ ಬಂಡವಾಳ (Paid up Capital)ವನ್ನು ರೂ. 7.50 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಸಲಾಯಿತು. ಹೊಸ ಶಾಖೆಗಳನ್ನು ತೆರೆಯುವ ಕಾರ್ಯಸೂಚಿಯನ್ನು 1965 ನಂತರವೂ ಮುಂದುವರೆಸಲಾಯಿತು. ಬ್ಯಾಂಕ್ 1968ರಲ್ಲಿಸಿದರ್ಜೆಯಿಂದಬಿದರ್ಜೆಯ ಉನ್ನತ ಸ್ಥಾನಕ್ಕೆ ಏರಿತು.

ಬ್ಯಾಂಕ್ ತನ್ನ ಶಾಖೆಗಳ ಸಂಖ್ಯೆಯನ್ನು 1969 ಹೊತ್ತಿಗೆ 75ಕ್ಕೆ ಏರಿಸಿತು. ಒಟ್ಟು ಠೇವಣಿ ರೂ. 10 ಕೋಟಿಯ ಗೆರೆಯನ್ನು ದಾಟಿ ರೂ. 12.63 ಕೋಟಿಯಾಗಿತ್ತು. ಒಟ್ಟು ಮುಂಗಡ ರೂ. 8.90 ಕೋಟಿ, ನಿವ್ವಳ ಲಾಭ ರೂ. 3.05 ಲಕ್ಷವನ್ನು ದಾಖಲಿಸಿತು. ಬ್ಯಾಂಕಿನ ಸಿಬ್ಬಂದಿ ಸಂಖ್ಯೆ 672 ಆಗಿತ್ತು. ಶೃಂಗೇರಿ ಶಾರದಾ ಬ್ಯಾಂಕ್ನ್ನು ತನ್ನಲ್ಲಿ ವಿಲೀನಗೊಳಿಸುವ ಸಮಯದಲ್ಲಿ ಬ್ಯಾಂಕ್ ನಿರ್ವಹಿಸುತ್ತದ್ದನಿತ್ಯ ಉಳಿತಾಯ ಖಾತೆಯನ್ನುಮಧುರ ಉಳಿತಾಯ ಖಾತೆಎಂದು ಮರುನಾಮಕರಣ ಮಾಡುವುದರ ಮೂಲಕ ಜನತೆಗೆ ವಿಸ್ತರಿಸಿ, ಬಹುಪಾಲು ಠೇವಣಿಯನ್ನು ಖಾತೆಯಡಿಯಲ್ಲಿ ಬ್ಯಾಂಕ್ ಸಂಗ್ರಹಿಸಿತು. ಬ್ಯಾಂಕ್ 1970ನೇ ದಶಕಕ್ಕೆ ತನ್ನ ಚಟುವಟಿಕೆಗಳಲ್ಲಿ ಹೊಸ ಉನ್ನತಿಯನ್ನು ಸಾಧಿಸುವುದರ ಮೂಲಕ ಕಾಲಿಟ್ಟಿತು. 1970ನೇ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಪಾವತಿಸಲಾದ ಬಂಡವಾಳ ರೂ. 15 ಲಕ್ಷದಿಂದ ರೂ. 19.36 ಲಕ್ಷಕ್ಕೆ ಏರಿಕೆಯಾಗಿತ್ತು. 1971ನೇ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಠೇವಣಿ ರೂ. 19.09 ಕೋಟಿ, ಒಟ್ಟು ಮುಂಗಡ ರೂ. 11.79 ಕೋಟಿ ಮತ್ತು ನಿವ್ವಳ ಲಾಭ ರೂ. 4.78 ಲಕ್ಷವಾಗಿತ್ತು. ಮುಂಬೈನಲ್ಲಿ ಬ್ಯಾಂಕಿನ ಪ್ರಥಮ ಶಾಖೆ 1971ನೇ ಇಸವಿಯಲ್ಲಿ ಪ್ರಾರಂಭವಾಯಿತು. ಇದೇ ವರ್ಷದಲ್ಲಿ ಶ್ರೀಯುತ ಕೆ.ಎಸ್.ಎನ್. ಅಡಿಗರು ತಮ್ಮ ವಕೀಲಿ ವೃತ್ತಿ ಮತ್ತು ರಾಜಕೀಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬ್ಯಾಂಕಿನ ಪೂರ್ಣಕಾಲಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರು. ಶ್ರೀ ಕೆ.ಎನ್. ಬಾಸ್ರಿಯವರು ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಮುಂದುವರೆದರು. ಇದೇ ವರ್ಷದ ಅಂತ್ಯದ ಒಳಗೆ 22 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಶಾಖೆಗಳ ಸಂಖ್ಯೆ ಶತಕದ ಗಡಿಯನ್ನು ದಾಟಿ 109 ಶಾಖೆಗಳಾದವು. ಬ್ಯಾಂಕಿನ 100ನೇ ಶಾಖೆಯೆಂದು ಕರೆಸಿಕೊಂಡ ಕೀರ್ತಿ ಮೇಲ್ಪಾಲ್ (ಚಿಕ್ಕಮಗಳೂರು ಜಿಲ್ಲೆ) ಶಾಖೆಯದ್ದಾಯಿತು.

ಮುಂದಿನ ವರ್ಷ (1972) ಬ್ಯಾಂಕಿನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲಿನ ವರ್ಷವಾಗಿ ದಾಖಲಾಯಿತು. ಕೇಂದ್ರ ಸರಕಾರದ ರೈಲ್ವೇ ಮಂತ್ರಿಯಾದ ಶ್ರೀ ಟಿ.. ಪೈಯವರ ಅಮೃತಹಸ್ತದಿಂದ ಬ್ಯಾಂಕಿನ ನೂತನ ಕೇಂದ್ರ ಕಛೇರಿ ಮಂಗಳೂರಿನ ಕೊಡಿಯಾಲ್ಬೈಲಿನಲ್ಲಿ ಉದ್ಘಾಟಿಸಲ್ಪಟ್ಟಿತು.

ಬ್ಯಾಂಕ್ ಹೊಸ ಶಾಖೆಗಳನ್ನು ತೆರೆದು ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಕಾರ್ಯವನ್ನು 1970 ದಶಕದಿಂದಲೇ ಪ್ರಾರಂಭಿಸಿತು. ದಶಕದ ಮೊದಲ ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಒಟ್ಟು 68 ಹೊಸ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಸಾಮಥ್ರ್ಯವನ್ನು ವಿಸ್ತರಿಸಿಕೊಂಡಿತು. ಇದರ ಪರಿಣಾಮವಾಗಿ ಬ್ಯಾಂಕ್ ತನ್ನ ಸುವರ್ಣ ಮಹೋತ್ಸವ ವರ್ಷವಾದ 1974ನೇ ಇಸವಿಯಲ್ಲಿ ರೂ. 33.14 ಕೋಟಿ ಠೇವಣಿ ಹಾಗೂ ರೂ. 22.09 ಕೋಟಿ ಮುಂಗಡ, 146 ಶಾಖೆಗಳು ಹಾಗೂ 1263 ಸಿಬ್ಬಂದಿ ವರ್ಗದವರೊಂದಿಗೆ ಬಲಿಷ್ಠ ಬ್ಯಾಂಕುಗಳಲ್ಲಿ ಅಗ್ರಣಿಯಾಗಿ ಗುರುತಿಸಿಕೊಂಡಿತು. ಬ್ಯಾಂಕಿನ ಇತಿಹಾಸದಲ್ಲಿ 1977ನೇ ಇಸವಿ ಅವಿಸ್ಮರಣೀಯ. ತನ್ನ ವ್ಯಕ್ತಿತ್ವವನ್ನು ನೇರ್ಪುಗೊಳಿಸುವ ದೃಷ್ಟಿಯಲ್ಲಿ ಮುಂದಡಿಯಿಟ್ಟ ಬ್ಯಾಂಕ್ ತನ್ನದೇ ಆದ ಛಾಪನ್ನು ವ್ಯವಹಾರ ಕ್ಷೇತ್ರದಲ್ಲಿ ಅಚ್ಚೊತ್ತಿತು. ಇದರ ಫಲವೇ ಕರ್ಣಾಟಕ ಬ್ಯಾಂಕ್ ಲಾಂಛನ. ಎರಡು ಸಮಕೋನ ತ್ರಿಕೋನಗಳ ನಡುವೆ ಬಿಂದು. ಹಿಂದೂ ಧರ್ಮದ ಪರಂಪರಾಗತ ಸಂಕೇತವೂ ಹೌದು. ಶ್ರೀ ಗಣಪತಿಯ ಲಾಂಛನವೂ ಹೌದು. ಬ್ಯಾಂಕಿಂಗ್ ರಂಗದ ಮಿನುಗುತಾರೆಯೂ ಹೌದು, ಸುಭದ್ರ ಬೆಳವಣಿಗೆ, ಶಿಸ್ತುಬದ್ಧ ನಡೆ, ಸೌಹಾರ್ದ ವಿಶ್ವಾಸದ ಪ್ರತೀಕವೂ ಹೌದು. ಶ್ರೀಸಾಮಾನ್ಯರ ಠೇವಣಿ ಭದ್ರವಾಗಿ ನಮ್ಮಲ್ಲಿ ವೃದ್ಧಿಸುವ ಸಂಕೇತವೂ ಹೌದು. ಹೀಗೆ ವಿವಿಧ ಅರ್ಥ, ವಿಶಾಲ ಅರ್ಥ. ಕರಾವಳಿಯ ಪ್ರಸಿದ್ಧ ಸಾಹಿತಿ, ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರ ಕಲ್ಪನಾ ಶಕ್ತಿಯ ಮೂಸೆಯಿಂದ ಮೈದಾಳಿದ ಚಿಹ್ನೆ, ಸ್ಥಿರತೆ, ಶಿಸ್ತು, ಸಾಮರಸ್ಯ ಹಾಗೂ ವಿಶ್ವಾಸದ ಸಂಕೇತವಾಗಿ ಗುರುತಿಸಿಕೊಂಡಿದೆ. ಲಾಂಛನ ಸ್ವೀಕೃತವಾಗಿ 1977ರಲ್ಲಿ ಒಂದು ವರ್ಣರಂಜಿತ ಸಮಾರಂಭದಂದು ಶೃಂಗೇರಿಯ ಆಗಿನ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಶ್ರೀಪಾದಂಗಳವರಿಂದ ಪ್ರದಾನಗೊಂಡಿತು.

ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರವನ್ನು ಆರಂಭಿಸಿದ್ದು. ವಿದೇಶಿ ವಿನಿಮಯ ವ್ಯವಹಾರದ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಲಾಯಿತು (ಅನಂತರ ವಿಭಾಗ ಮುಂಬೈಗೆ ವರ್ಗಾವಣೆಗೊಂಡಿತು). ಹೊಸ 29 ಶಾಖೆಗಳು ಕಾರ್ಯಾರಂಭಿಸುವು ದರೊಂದಿಗೆ 1977ನೇ ಇಸವಿಯಲ್ಲಿ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 210ಕ್ಕೆ ಏರಿತು. ಬ್ಯಾಂಕಿನ 200ನೇ ಶಾಖೆ ಎಂಬ ಹೆಮ್ಮೆಗೆ ನಾರ್ವೆ (ಚಿಕ್ಕಮಗಳೂರು ಜಿಲ್ಲೆ) ಪಾತ್ರವಾಯಿತು. ಬ್ಯಾಂಕಿನ ಪಾವತಿ ಬಂಡವಾಳ (paid-up capital) ವು ರೂ. 20 ಲಕ್ಷದಿಂದ ರೂ. 30 ಲಕ್ಷಕ್ಕೆ ಏರಿತು.

ಕರ್ಣಾಟಕ ಬ್ಯಾಂಕು ತನ್ನ ಉದ್ಯೋಗಿಗಳ ಹಾಗೂ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾದ ಬಾಂಧವ್ಯ ಹೊಂದಿದೆ. ಉದ್ಯೋಗಿಗಳ ಹಿತರಕ್ಷಣೆಯ ಹೊಣೆ ಹೊತ್ತು ಕರ್ಣಾಟಕ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್ (KBEA) 1964ರಲ್ಲಿ ರೂಪುಗೊಂಡಿತು.

ಪೂರ್ಣಕಾಲಿಕ ಅಧ್ಯಕ್ಷರಾಗಿ ಶ್ರೀ ಕೆ.ಎಸ್.ಎನ್ ಅಡಿಗರು ಬ್ಯಾಂಕಿನ ಚುಕ್ಕಾಣಿ ಹಿಡಿದು 1970 ದಶಕದ ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಬ್ಯಾಂಕನ್ನು ಮುನ್ನಡೆಸಿದರು. ಫೆಬ್ರವರಿ 15, 1979 ರಂದು ಶ್ರೀಯುತ ಅಡಿಗರು ತಮ್ಮ 65ನೇ ವಯಸ್ಸಿನಲ್ಲಿ ಬ್ಯಾಂಕಿನ ಅಧ್ಯಕ್ಷಗಿರಿಯಿಂದ ನಿವೃತ್ತರಾದಾಗ, ಶ್ರೀ ಕೆ.ಎನ್. ಬಾಸ್ರಿಯವರು ಜವಾಬ್ದಾರಿಯನ್ನು ವಹಿಸಿಕೊಂಡರು. ಕೇಂದ್ರೀಯ ವಿದೇಶಿ ವಿನಿಮಯ ವಿಭಾಗವನ್ನು 1979 ಅವಧಿಯಲ್ಲಿ ಮುಂಬೈಗೂ ಹಾಗೂ ಸಿಬ್ಬಂದಿ ತರಬೇತಿ ಕಾಲೇಜನ್ನು ಬ್ಯಾಂಕಿನ ಕೇಂದ್ರ ಕಛೇರಿಯಿಂದ ಡೊಂಗರಕೇರಿಗೂ ಸ್ಥಳಾಂತರಿಸಲಾಯಿತು. ವಿದೇಶಿ ವಿನಿಮಯವನ್ನು ನಿರ್ವಹಿಸಲು ಆರು ಶಾಖೆಗಳಿಗೆ ಅನುಮತಿಯನ್ನು ನೀಡಲಾಯಿತು. ಬ್ಯಾಂಕ್ ರೂ. 100 ಕೋಟಿಯ ಠೇವಣಿ ಗಡಿಯನ್ನು ದಾಟಿ 31.12.1979 ರಲ್ಲಿ ರೂ. 104.24 ಕೋಟಿಗಳ ಠೇವಣಿಯನ್ನು ಹೊಂದಿದ ಘನತೆಗೆ ಪಾತ್ರವಾಯಿತು.

24.12.76
ರಂದು ಬೆಂಗಳೂರಿನಲ್ಲೊಂದು ಪ್ರಾದೇಶಿಕ ಕಚೇರಿಯ ಸ್ಥಾಪನೆಯಾಯಿತು. ಮದ್ರಾಸಿನ ಜಾರ್ಜ್ ಟೌನ್ ಶಾಖೆಯ ಸುವರ್ಣ ಮಹೋತ್ಸವವನ್ನು 1980ರಲ್ಲಿ ಆಚರಿಸಲಾಯಿತು. ಶ್ರೀ ಕೆ.ಎನ್ ಬಾಸ್ರಿಯವರು ಬ್ಯಾಂಕಿನ ಅಧ್ಯಕ್ಷಗಿರಿಯಿಂದ ಫೆಬ್ರವರಿ 1980ರಲ್ಲಿ ನಿವೃತ್ತರಾದರು. ನೂತನ ಅಧ್ಯಕ್ಷರಾಗಿ ಯುನೈಟೆಡ್ ಏಷಿಯನ್ ಬ್ಯಾಂಕ್, ಕೌಲಾಲಂಪುರ, ಮಲೇಷ್ಯ ಇದರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಪಿ. ರಘುರಾಮ್ ಅವರು ಅಧಿಕಾರ ವಹಿಸಿಕೊಂಡರು. ಸಿಂಡಿಕೇಟ್ ಬ್ಯಾಂಕಿನಲ್ಲಿ ವಿಭಾಗೀಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಾರ್ಟರ್ಡ್ ಎಕೌಂಟೆಂಟ್ ಶ್ರೀ ಪಿ. ಸುಂದರ ರಾವ್ ಇವರನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಯಿತು. ಆಡಳಿತ ವಿಕೇಂದ್ರಿಕರಣದ ಮುಂದುವರಿಕೆಯಾಗಿ ಇನ್ನೂ ಆರು ವಿಭಾಗೀಯ ಕಛೇರಿಗಳನ್ನು ಹಾಸನ (ಮುಂದೆ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿತು). ಹುಬ್ಬಳ್ಳಿ, ಮಂಗಳೂರು, ಮೈಸೂರು, ಮುಂಬೈ ಹಾಗೂ ಮದ್ರಾಸ್ನಲ್ಲಿ ಪ್ರಾರಂಭಿಸಲಾಯಿತು. ಶ್ರೀ ಕೆ.ಎಸ್.ಎನ್. ಅಡಿಗರನ್ನು ಬ್ಯಾಂಕಿನ ಸೇವೆಗಾಗಿ ನಿರ್ದೇಶಕರ ಮಂಡಳಿಯಲ್ಲಿ ಪುನ: ಸೇರಿಸಿಕೊಳ್ಳಲಾಯಿತು. ಬ್ಯಾಂಕಿನ ಠೇವಣಿ ರೂ. 200 ಕೋಟಿಗಿಂತ ಕಡಿಮೆ ಇದ್ದ ಕಾರಣ ಬ್ಯಾಂಕ್ ರಾಷ್ಟ್ರೀಕರಣದ ಬೀಸುಗತ್ತಿಯಿಂದ ಪಾರಾಯಿತು.

ಬ್ಯಾಂಕಿನ ವಜ್ರಮಹೋತ್ಸವ ವರ್ಷವನ್ನು 1984ರಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಅದರ ವಜ್ರ ಮಹೋತ್ಸವ ವರ್ಷದ ಸವಿನೆನಪಿಗಾಗಿ, ಡೈಮಂಡ್ ಜ್ಯುಲಿ ಕ್ಯಾಶ್ ಸರ್ಟಿಫಿಕೇಟ್ (ಡಿಐಸಿಸಿ) ಎಂಬ ಠೇವಣಿ ಯೋಜನೆಯನ್ನು ಹೊರತರಲಾಯಿತು. ಬ್ಯಾಂಕಿನ ಗೃಹಪತ್ರಿಕೆಅಭ್ಯುದಯವನ್ನು ಇದೇ ವರ್ಷ ಪ್ರಾರಂಭಿಸಲಾಯಿತು. ಇದರಿಂದ ಬ್ಯಾಂಕಿನ ಸಿಬ್ಬಂದಿ ನಡುವೆ ಆಂತರಿಕ ಸಂವಹನ ಮತ್ತು ಅವರಲ್ಲಿನ ಸಾಹಿತ್ಯಿಕ ಪ್ರತಿಭೆ ಬೆಳಕು ಕಾಣುವಂತಾಯಿತು. ಬ್ಯಾಂಕಿನ ಮುಂಗಡ ಡಿಸೆಂಬರ್ 1984 ಅಂತ್ಯದಲ್ಲಿ ಶತಕದ ಗಡಿಯನ್ನು ದಾಟಿ ರೂ. 122.22 ಕೋಟಿಯನ್ನು ಮುಟ್ಟಿತು.

ಪಿ
. ರಘುರಾಮ್ ಇವರು ಬ್ಯಾಂಕಿನ ಮುಂಗಡ ವಿಭಾಗದಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ತಂದರು ಹಾಗೂ ಸಿಬ್ಬಂದಿ ಹಕ್ಕುಗಳನ್ನು ನೇರ್ಪುಗೊಳಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ (ಕೆಬಿಓಓ) ಅನ್ನು ಅಧಿಕೃತಗೊಳಿಸಿದರು. ಅವರ ಅಧಿಕಾರವಧಿಯಲ್ಲಿ ಬ್ಯಾಂಕಿಗೆ ಹಲವಾರು ಪ್ರತಿಭಾವಂತ, ಯುವ ಅಧಿಕಾರಿಗಳ ಸೇವೆ ದೊರೆತು ಅವರು ಮುಂದೆ ಬ್ಯಾಂಕಿನಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವಲ್ಲಿ ಸಹಕಾರಿಯಾಯಿತು. ಪಿ. ರಘುರಾಮ್ರವರು ತಮ್ಮ ಐದು ವರ್ಷಗಳ ಸೇವೆಯ ನಂತರ 1985ರಲ್ಲಿ ನಿವೃತ್ತರಾದಾಗ ಶ್ರೀ ಪಿ. ಸುಂದರರಾವ್ ರವರು ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆಗ ಬ್ಯಾಂಕಿನ ಠೇವಣಿ ರೂ. 251.89 ಕೋಟಿಗಳಷ್ಟಾಗಿ 1980ಕ್ಕೆ ಹೋಲಿಸಿದಾಗ ಶೇ.200ರಷ್ಟು ಪ್ರಗತಿಯನ್ನು ಕಂಡಿತ್ತು. ಬ್ಯಾಂಕಿನ ಮುಂಗಡ ಕೂಡ ದ್ವಿಗುಣಗೊಂಡು ರೂ. 143.67 ಕೋಟಿಗಳಷ್ಟಾಗಿತ್ತು.

ಕೇಂದ್ರ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗವನ್ನು ತೆರೆಯುವ ಮೂಲಕ ಬ್ಯಾಂಕ್ 1986ರಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಯುಗಕ್ಕೆ ಪಾದಾರ್ಪಣೆ ಮಾಡಿತು. ಬ್ಯಾಂಕಿನ ಠೇವಣಿ ಡಿಸೆಂಬರ್ 31, 1986ರಲ್ಲಿ ರೂ. 302.01 ಕೋಟಿಗಳಾಗಿದ್ದರೆ ಇದು ಒಂದು ವರ್ಷದ ತರುವಾಯ ರೂ. 357.50 ಕೋಟಿಯನ್ನು ದಾಟಿತು.

ಸಿಬ್ಬಂದಿಗಳೊಂದಿಗೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಮುಂದಡಿಯಿರಿಸಿದ ಬ್ಯಾಂಕ್ 1987ರಲ್ಲಿ ಕರ್ಣಾಟಕ ಬ್ಯಾಂಕ್ ಎಂಪ್ಲಾಯಿಸ್ ಎಸೋಸಿಯೇಷನ್ (ಕೆಬಿಇಎ) ಸಹಭಾಗಿತ್ವದಲ್ಲಿ ಉತ್ತಮ ಪ್ರತಿಫಲ ಕಂಡ ಠೇವಣಿ ಸಂಚಯ ಸ್ಪರ್ಧೆಯನ್ನು ಏರ್ಪಡಿಸಿತು. ಪ್ರಥಮ ರಜತ ಫಲಕವನ್ನು ಪಾಂಡಿಚೇರಿ ಶಾಖೆ ತನ್ನದಾಗಿಸಿಕೊಂಡಿತು.

ಬರಪೀಡಿತ ಪ್ರದೇಶಗಳಲ್ಲಿ 1986ರಲ್ಲಿ ಬ್ಯಾಂಕ್ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಕರ್ನಾಟಕ ಸರಕಾರದ ಮುಕ್ತ ಪ್ರಶಂಸೆಗೆ ಪಾತ್ರವಾದವು. ಪ್ರಾಯೋಗಿಕ ನೆಲೆಯಲ್ಲಿ ಬರಪೀಡಿತ ಬಾಗಲಕೋಟೆ ಪ್ರದೇಶದಲ್ಲಿ ಬ್ಯಾಂಕ್ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗುವುದರೊಂದಿಗೆ ಕೆಲಸ ಕಾರ್ಯಗಳನ್ನು ಮುಂದೆ ತುಮಕೂರು, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು ಮತ್ತು ಬಿಜಾಪುರ ಜಿಲ್ಲೆಗಳ ಇತರ ಪ್ರದೇಶಗಳಿಗೆ ವಿಸ್ತರಿಸಲಾಯಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪಿ. ಸುಂದರ ರಾವ್ ಇವರ ಮುತುವರ್ಜಿಯಲ್ಲಿ 1985ರಿಂದ 1989 ಅವಧಿಯಲ್ಲಿ ಬ್ಯಾಂಕಿನ ಕೆಲಸ ಕಾರ್ಯಗಳಲ್ಲಿ ಸುಸೂತ್ರತೆ ಮತ್ತು ಸ್ವಚ್ಛತೆಯ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ವಿಧಿ-ವಿಧಾನಗಳನ್ನು ಸರಳೀಕರಿಸಿ, ಕೆಲಸ ಹಂಚುವಿಕೆಯನ್ನು ಉತ್ತಮೀಕರಿಸಲಾಯಿತು. ಜವಾಬ್ದಾರಿಯುತ ಹೊಸ ಅಧಿಕಾರ ಕೇಂದ್ರಗಳನ್ನು ಸ್ಥಾಪಿಸಲಾಯಿತು.

ಶ್ರೀ ಪಿ. ಸುಂದರ ರಾವ್ರವರು ಬ್ಯಾಂಕಿನ ಅಧ್ಯಕ್ಷಗಿರಿಯಿಂದ 1990ರಲ್ಲಿ ನಿವೃತ್ತರಾದಾಗ ಅವರ ಸ್ಥಾನವನ್ನು ಎಚ್.ಎಂ. ರಾಮರಾವ್ ರವರು ಅಲಂಕರಿಸಿದರು. ರಾಮರಾವ್ ಇವರು 1950ರಲ್ಲಿ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಸೇರಿದ್ದರೂ, ತಮ್ಮ ಕಾರ್ಯದಕ್ಷತೆಯಿಂದ ಉನ್ನತ ಹುದ್ದೆಗಳಿಗೇರಿ ಸುಂದರರಾವ್ರವರು ನಿವೃತ್ತರಾಗುವ ಸಮಯದಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿದ್ದರು.

ಬ್ಯಾಂಕಿನಲ್ಲಿ ಸೇವಾಕ್ಷೇತ್ರ ವಿಧಾನವನ್ನು ಮೊದಲ ಬಾರಿಗೆ ಬ್ಯಾಂಕಿನ 163 ಶಾಖೆಗಳಲ್ಲಿ 1355 ಗ್ರಾಮಗಳನ್ನು ಸೇವಾಕ್ಷೇತ್ರವನ್ನಾಗಿ ಪರಿಗಣಿಸಿ, ಪರಿಚಯಿಸಲಾಯಿತು. 1989ರಲ್ಲಿ ಬ್ಯಾಂಕ್ ಕೃಷಿ ಕಾರ್ಡ್ ಸೇವೆಯನ್ನು ಹಾಗೂ Merchant ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭ ಮಾಡಿತು. ಬ್ಯಾಂಕ್ ತನ್ನ ವ್ಯವಹಾರ ಮತ್ತು ಲಾಭ ಗಳಿಸುವ ಕ್ಷಮತೆಯನ್ನು 1990 ರಿಂದ 1993 ಅವಧಿಯಲ್ಲಿ ಕ್ರಮೇಣವಾಗಿ ಅಭಿವೃದ್ಧಿಪಡಿಸಿಕೊಂಡಿತು.

ಇದೇ ಅವಧಿಯಲ್ಲಿ ಎಚ್.ಎಂ. ರಾಮರಾವ್ರವರು ಬ್ಯಾಂಕಿನ ಅಧ್ಯಕ್ಷಗಿರಿಯಿಂದ ನಿವೃತ್ತರಾಗಿ ಮುಂದಿನ ಅಧ್ಯಕ್ಷ ಶ್ರೀ ಯು.ವಿ. ಭಟ್ರವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ಯಾಂಕಿನ ಠೇವಣಿ ರೂ. 843.56 ಕೋಟಿ ಮತ್ತು ಮುಂಗಡ ರೂ 474.26 ಕೋಟಿಯನ್ನು ದಾಟಿತ್ತು. ಬ್ಯಾಂಕಿನ ನಿವ್ವಳ ಲಾಭ ರೂ. 6.63 ಕೋಟಿಯಷ್ಟಾಗಿ, ಶ್ರೀ ರಾಮರಾವ್ರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಸುಮಾರು ಆರು ಪಟ್ಟು ಹೆಚ್ಚಳವನ್ನು ಸಾಧಿಸಿತ್ತು.

ಬ್ಯಾಂಕಿನ ಮೊದಲ ಸೇವಾ ಶಾಖೆಯನ್ನು(Service Branch) ಮುಂಬೈನಲ್ಲಿ 1994-95ನೇ ಹಣಕಾಸು ವರ್ಷದಲ್ಲಿ ಪ್ರಾರಂಭಿಸಲಾಯಿತಲ್ಲದೇ ಬೆಂಗಳೂರಿನಲ್ಲಿ ಕೈಗಾರಿಕಾ ಹಣಕಾಸು ಶಾಖೆಯನ್ನು ಸ್ಥಾಪಿಸಲಾಯಿತು. ಮಾರ್ಚ್ 1995 ಅಂತ್ಯದಲ್ಲಿ ಬ್ಯಾಂಕಿನ ಠೇವಣಿ ರೂ. 1333.68, ಮುಂಗಡ ರೂ. 812.29 ಹಾಗು ನಿವ್ವಳ ಲಾಭ ರೂ. 12.58 ಕೋಟಿ ರೂ. ಗಡಿಯನ್ನು ಮೀರಿತು. ಅವಧಿಯಲ್ಲಿ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 287 ಆಗಿತ್ತು. ಬ್ಯಾಂಕನ್ನು ಅತ್ಯಂತ ಕ್ಲಿಷ್ಟಕರ ಅವಧಿಯಲ್ಲಿಯೂ ಕೂಡ ತನ್ನ ಚಾಣಾಕ್ಷ ನಡೆಗಳಿಂದ ಮುಂದಾಳತ್ವ ಗುಣಗಳಿಂದ ಕಠಿಣ ನಿರ್ಧಾರಳಿಂದ ಮುನ್ನಡೆಸಿದ ಶ್ರೀ ಯು.ವಿ.ಭಟ್ರವರು ಜೂನ್ 1995 ರಲ್ಲಿ ಬ್ಯಾಂಕಿನ ಅಧ್ಯಕ್ಷತೆಯಿಂದ ನಿವೃತ್ತರಾದರು. ಬ್ಯಾಂಕು ಮುಂದಿನ ಹಲವು ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಎಲ್ಲಾ ಕೊಡುಗೆಗಳು ಸಹಕಾರಿಯಾದವು.

ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದ ಚಾರ್ಟಡ್ ಎಕೌಂಟೆಂಟ್ ಶ್ರೀ ಎಂ.ಎಸ್. ಕೃಷ್ಣ ಭಟ್ ಇವರು ತಮ್ಮ ಸುಮಾರು 30 ವರ್ಷಗಳ ಸೇವೆಯ ನಂತರ ಬ್ಯಾಂಕಿನ ಅಧ್ಯಕ್ಷರಾಗಿ ಜೂನ್ 12, 1995ರಂದು ಅಧಿಕಾರ ಸ್ವೀಕರಿಸಿದಾಗ, ಅದು ಮುಂದಿನ ಹಲವು ವರ್ಷಗಳ ಉತ್ಕರ್ಷಕಾರಿ ವ್ಯವಹಾರವರ್ಧನೆಗೆ ನಾಂದಿ ಹಾಡಿದ ಸಮಯವಾಗಿತ್ತು.

ಶ್ರೀಯುತ ಎಂ.ಎಸ್. ಕೃಷ್ಣ ಭಟ್ರವರ ಅಧ್ಯಕ್ಷಗಿರಿಯ ಮೊದಲ ವರ್ಷ ಅಂದರೆ 1995-96ನೇ ಇಸವಿಯಲ್ಲಿ ಬ್ಯಾಂಕು ತನ್ನ ಇತಿಹಾಸದಲ್ಲಿ ಹಲವು ಹೊಸ ಮೈಲಿಗಲ್ಲನ್ನು ಸ್ಥಾಪಿಸಿ ದಾಪುಗಾಲಿಕ್ಕಿತು. ಬ್ಯಾಂಕಿನ ಠೇವಣಿ ರಾಷ್ಟ್ರೀಯ ಸರಾಸರಿಯಾದ ಶೇ. 13ರಷ್ಟನ್ನು ಹಲವುಪಟ್ಟು ಮೀರಿ ಶೇ. 40ರಷ್ಟು ಪ್ರಗತಿಯನ್ನು ಸಾಧಿಸಿ, ರೂ. 1855.31 ಕೋಟಿಯ ಮಟ್ಟವನ್ನು ಮುಟ್ಟಿತು. ಬ್ಯಾಂಕಿನ ಮುಂಗಡ ರೂ. 1184.42 ಕೋಟಿಯನ್ನು ಮುಟ್ಟಿತು. ಬ್ಯಾಂಕಿನ ನಿವ್ವಳ ಲಾಭ ಹಿಂದಿನ ವರ್ಷಕ್ಕಿಂತ ಶೇ. 101 ಪ್ರಗತಿಯನ್ನು ದಾಖಲಿಸಿ ರೂ. 25.24 ಕೋಟಿಗೇರಿತು. ಸಾಲ-ಠೇವಣಿ ಅನುಪಾತ ದಾಖಲೆಯ ಶೇ. 64 ಮಟ್ಟಕ್ಕೇರಿ ಬ್ಯಾಂಕಿಂಗ್ ಉದ್ಯಮದ ಉನ್ನತ ಮಟ್ಟದಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು. ಅನುತ್ಪಾದಕ ಆಸ್ತಿಗಳ ಪ್ರಮಾಣ ಗಣನೀಯವಾಗಿ ಇಳಿದುದು ಗಮನಾರ್ಹ. ಬ್ಯಾಂಕಿನ ಒಟ್ಟು ಆಸ್ತಿ, ಸಾರ್ವಜನಿಕ ಶೇರು ಬಿಡುಗಡೆಯ ಪರಿಣಾಮ ಮತ್ತು ದಾಖಲೆ ಮಟ್ಟ ನಿವ್ವಳ ಲಾಭ ಗಳಿಕೆಯಿಂದಾಗಿ ರೂ. 142.71 ಕೋಟಿಗೆ ಏರಿತು.

ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ”, ಕರ್ಣಾಟಕ ಬ್ಯಾಂಕ್ ತನ್ನ ಸೇವಾಗುಣಮಟ್ಟವನ್ನು 2000ನೇ ಇಸವಿಯ ಕೊನೆಯ ತ್ರೈಮಾಸಿಕದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಕೋರ್ ಬ್ಯಾಂಕಿಂಗ್ ಸೊಲ್ಯುಶನ್ ಅಳವಡಿಸಿ ಖಾಸಗಿ ರಂಗದ ಬ್ಯಾಂಕ್ಗಳಲ್ಲಿ ಪ್ರಥಮವಾಗಿ ಕೋರ್ ಬ್ಯಾಂಕಿಂಗ್ ಸೊಲ್ಯುಶನ್ ಹೊಂದಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಎಂ.ಎಸ್. ಕೃಷ್ಣ ಭಟ್ಟರ ನೇತೃತ್ವ ಬ್ಯಾಂಕಿನ ಅಭಿವೃದ್ಧಿಯ ನವ ಮನ್ವಂತರಕ್ಕೆ ನಾಂದಿಯಾಯಿತು. ಜುಲೈ 2000ಕ್ಕೆ ಅವರ ಸಾರ್ಥಕ ಅಧ್ಯಕ್ಷತೆ ಸಂಪನ್ನಗೊಂಡ ನಂತರ, ಶ್ರೀ ಅನಂತಕೃಷ್ಣರವರು ಬ್ಯಾಂಕಿನ ಅಧ್ಯಕ್ಷರಾಗಿ ಸಾರಥ್ಯ ವಹಿಸಿದರು. ಅನಂತಕೃಷ್ಣರವರು ಕರ್ಣಾಟಕ ಬ್ಯಾಂಕ್ ಸೇರಿದುದು 1971 ರಲ್ಲಿ ಅಧಿಕಾರಿಯಾಗಿ. ಶ್ರೀ ಅನಂತಕೃಷ್ಣರ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಸವಾಲುಗಳು ಎದುರಾದವು. ಉದಾರೀಕರಣ ಮತ್ತು ವಾಣಿಜ್ಯೀಕರಣ, ವಿದೇಶಿ ಬ್ಯಾಂಕುಗಳ ಆಗಮನ, ಬ್ಯಾಂಕ್ ವ್ಯವಹಾರಕ್ಕೆ ಪೆಡಂಭೂತವಾಗಿ ಇದಿರಾದ ಅನುತ್ಪಾದಕ ಸಾಲದ ಹೊರೆಗಳು ಹೀಗೆ ಹಲವು ಸವಾಲುಗಳೆನ್ನೆದುರಿಸಿ ಬ್ಯಾಂಕನ್ನು ಯಶಸ್ಸಿನ ಪಥದಲ್ಲಿ ಸಮರ್ಥವಾಗಿ ಮುನ್ನಡೆಸಿದವರು ಅನಂತಕೃಷ್ಣ. ಇವರ ಅವಿಚ್ಛಿನ್ನ ಒಂಭತ್ತು ವರ್ಷಗಳ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ ರೂ. 7165 ಕೋಟಿಗಳಿಂದ ರೂ. 32034 ಕೋಟಿಗಳನ್ನು ತಲುಪಿತು. ಇವರು ಅಧಿಕಾರ ವಹಿಸಿಕೊಂಡಾಗ ಇದ್ದ ಶಾಖೆಗಳ ಸಂಖ್ಯೆ 350. ಅಧ್ಯಕ್ಷತೆಯಿಂದ ನಿರ್ಗಮಿಸುವಾಗ ಶಾಖೆಗಳ ಸಂಖ್ಯೆ 449ಕ್ಕೆ ತಲುಪಿತು. ಬ್ಯಾಂಕು

ಸಮಯದಲ್ಲೇ ಅಂದರೆ 2003ನೇ ಇಸವಿಯಲ್ಲಿ ಕೊಡಿಯಾಲ್ಬೈಲಿನಲ್ಲಿ ಕಟ್ಟಲಾಗಿದ್ದ 35000 ಚದರ ಅಡಿಯ ಕಟ್ಟಡದಿಂದ ಕಂಕನಾಡಿಯ ಮಹಾವೀರ ವೃತ್ತದ ಬಳಿ ಸುಮಾರು 1,35,000 ಚದರಡಿಯ ಭವ್ಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಸುಮಾರು 5 ಎಕರೆ ವಿಶಾಲವಾದ ಕ್ಯಾಂಪಸ್ನ್ನು ಹೊಂದಿದ ಭವ್ಯಕಟ್ಟಡ ನಗರದಲ್ಲಿಯೇ ಆಕರ್ಷಣೀಯ ಕಟ್ಟಡವೆನಿಸಿತು. ಅನಂತಕೃಷ್ಣರ ಒಂಭತ್ತು ವರ್ಷಗಳ ಸಾರ್ಥಕ ಸೇವೆಯ ನಂತರ ಬ್ಯಾಂಕಿನ ಅಧಿಪತ್ಯವನ್ನು ವಹಿಸಿದವರು ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾದ ಶ್ರೀ ಪಿ. ಜಯರಾಮ ಭಟ್ ಅವರು. ಶ್ರೀಯುತರು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳಾಗಿ 2009 ಜುಲೈ ತಿಂಗಳಲ್ಲಿ ನೇಮಕವಾದರು. ಇವರು ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನ ಒಟ್ಟು ವಹಿವಾಟು ರೂ.32,034 ಕೋಟಿ. ಸದಾ ಮಂದಸ್ಮಿತರಾಗಿ ಅಪಾರ ಜನಪ್ರಿಯರಾಗಿ, ಜನಾನುರಾಗಿಯಾಗಿ ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದ ಶ್ರೀ ಪಿ ಜಯರಾಮ ಭಟ್, ಆಡಳಿತ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ 3 ವರ್ಷದ 3ನೇ ಅವಧಿಗೆ ಆಯ್ಕೆಯಾದರು. ಸದಾ ಬ್ಯಾಂಕಿನ ಏಳ್ಗೆಯ ಬಗ್ಗೆ ಯೋಚಿಸುತ್ತಿದ್ದ ಶ್ರೀಯುತರು ತಮ್ಮ ನಂತರದ ಸಮರ್ಥ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿದ್ದರು. ಆಗ ಅವರಕಣ್ಣಿಗೆ ಗೋಚರವಾದದ್ದು ಕುಶಾಗ್ರಮತಿಯ ಉತ್ತಮ ಚಾರಿತ್ರ್ಯದ ಚುರುಕಾದ ವ್ಯಕ್ತಿ ಶ್ರೀ ಮಹಾಬಲೇಶ್ವರ ಎಂ.ಎಸ್. ಅವರು. ಶ್ರೀ ಪಿ ಜಯರಾಮ ಭಟ್ ಇವರ ಗರಡಿಯಲ್ಲೇ ಪಳಗಿದ ಶ್ರೀ ಮಹಾಬಲೇಶ್ವರ ಎಂ ಎಸ್ ಅವರನ್ನು ತನ್ನ ಉತ್ತರಾಧಿಕಾರಿ ಎಂದು ನೇಮಿಸುವಂತೆ ಆರ್.ಬಿ.ಐಗೆ ವಿನಂತಿಸಿದರು. ಶ್ರೀ ಪಿ ಜಯರಾಮ ಭಟ್ ಅವರ ಆಡಳಿತಾವಧಿ ಇನ್ನೂ 15 ತಿಂಗಳು ಬಾಕಿ ಇರುವಾಗಲೇ ಪದತ್ಯಾಗ ಮಾಡಿ ಶ್ರೀ ಮಹಾಬಲೇಶ್ವರ ಎಂ.ಎಸ್ ಅವರು ಬ್ಯಾಂಕಿನ ಎಂ.ಡಿ ಹಾಗೂ ಸಿ.. ಆಗಿ ಬ್ಯಾಂಕನ್ನು ಮುನ್ನಡೆಸುವ ಜವಾಬ್ದಾರಿ ನೀಡಿ ಬ್ಯಾಂಕಿನ ನಾನ್ಎಕ್ಸಿಕ್ಯೂಟಿವ್ ಚೇರ್ಮೆನ್ ಆಗಿ ನಿಯುಕ್ತಿಗೊಂಡು ಬ್ಯಾಂಕಿನ ಅಭಿವೃದ್ಧಿಗೆ ನೇಪಥ್ಯದಲ್ಲಿ ಬೆಂಬಲವಾಗಿ ನಿಂತರು. ಶ್ರೀ ಪಿ ಜಯರಾಮ ಭಟ್ ಅವರ ಅಧಿಕಾರವಧಿಯ ಕೊನೆಯಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ ರೂ.93,843 ಕೋಟಿಗೆ ತಲುಪಿತು. ಬ್ಯಾಂಕಿನ ಒಟ್ಟು ಶಾಖೆಗಳು 765 ಹಾಗೂ ಎಟಿಎಂ 1380ಗಳನ್ನು ಒಳಗೊಂಡಂತೆ ಒಟ್ಟು 2148 ಸೇವಾಕೇಂದ್ರಗಳನ್ನು ಹೊಂದಿತು.

ಶ್ರೀ ಪಿ ಜಯರಾಮ ಭಟ್ ಅವರ ನಂತರ ಬ್ಯಾಂಕಿನ ಎಂ.ಡಿ ಹಾಗೂ ಸಿ.. ಆಗಿ ನೇಮಕಗೊಂಡಿರುವ ಶ್ರೀ ಮಹಾಬಲೇಶ್ವರ ಎಂ.ಎಸ್ ಅವರು ಅಪಾರ ಕ್ರಿಯಾಶೀಲ ವ್ಯಕ್ತಿ. ಬ್ಯಾಂಕಿನ ಏಳ್ಗೆಗಾಗಿ ಉನ್ನತ ಕನಸುಗಳನ್ನು ಹೊಂದಿರುವ ಇವರು ತಮ್ಮ ಸಮರ್ಥ ನಾಯಕತ್ವದಿಂದ ಬ್ಯಾಂಕಿಗೊಂದು ಹೊಸ ಆಯಾಮವನ್ನು ನೀಡಲು ಟೊಂಕ ಕಟ್ಟಿದ್ದಾರೆ. 8000 ಮಿಕ್ಕಿ ಇರುವ ಬ್ಯಾಂಕಿನ ಸಿಬ್ಬಂದಿವರ್ಗ ಶ್ರೀಯುತರ ಆಶಯದಂತೆ ಬ್ಯಾಂಕಿನ ಬೆಂಬಲಕ್ಕೆ ನಿಂತಿದೆ.

ಕರ್ಣಾಟಕ ಬ್ಯಾಂಕು ಇಂದು 22 ರಾಜ್ಯಗಳಲ್ಲಿ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ತನ್ನ 772 ಶಾಖೆ 1396 ಎಟಿಎಂಗಳನ್ನು ಹೊಂದಿ (111 ಇಲಾಬಿ / ಮಿನಿ ಇಲಾಬಿಗಳನ್ನು ಒಳಗೊಂಡು) ಒಟ್ಟು 2171 ಸೇವಾ ಕೇಂದ್ರಗಳನ್ನು ದೇಶದಾದ್ಯಂತ ತೆರೆದು, ಸುಮಾರು 80 ಲಕ್ಷ ಗ್ರಾಹಕರನ್ನೂ ಹೊಂದಿ ದೇಶದ ಆರ್ಥಿಕತೆಗೆ ಹಾಗೂ ತನ್ಮೂಲಕ ಜನಸಮೂಹಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಲಿದೆ. ಜನ ಸಮೂಹದಿಂದಲೇ ಉದಯಿಸಿ ಬಂದ ಬ್ಯಾಂಕು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯನ್ನರಿತು ಸಮಾಜ ಮುಖಯಾದ ಹಲವು ಸೇವೆಗಳನ್ನು ಮಾಡುತ್ತಲಿದೆ. ವಿದ್ಯಾಕ್ಷೇತ್ರ, ಆರೋಗ್ಯಕ್ಷೇತ್ರ, ಅನೇಕ ಮೂಲ ಸೌಲಭ್ಯಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ರಾಷ್ಟ್ರೀಯ ಸ್ವತ್ತುಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಗ್ರಾಮೀಣ ಕರಕುಶಲ ಕೈಗಾರಿಕೆ ಮುಂತಾದ ಕ್ಷೇತ್ರಗಳಿಗೆ ತನ್ನ ಕೊಡುಗೆ ನೀಡುತ್ತಲಿದೆ. “ಸ್ವಚ್ಛಭಾರತಅಭಿಯಾನದಲ್ಲಿ ಪಾಲ್ಗೊಂಡು ಹಲವಾರು ಶಾಲೆಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಶೌಚಾಲಯಗಳನ್ನು ನಿರ್ಮಿಸಿದೆ. ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವಲ್ಲಿಯೂ ಮುಂಚೂಣಿಯಲ್ಲಿದೆ. ಇಂತಹ ಕೆಲಸಕಾರ್ಯಗಳು ದೀರ್ಘ ಕಾಲದಲ್ಲಿ ತುಂಬಾ ಪರಿಣಾಮ ಬೀರಲಿವೆ.

ಹೀಗೆ ಕರ್ನಾಟಕದ ಹೆಮ್ಮೆಯ ಬ್ಯಾಂಕ್ ಆಗಿ ದೇಶಾದ್ಯಂತ ಮನೆಮಾತಾಗಿರುವ ಕರ್ಣಾಟಕ ಬ್ಯಾಂಕ್ ತನ್ನ ಸ್ಥಾಪಕರ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಾ, ಶತಮಾನೋತ್ಸವದತ್ತ ದಾಪುಗಾಲು ಹಾಕುತ್ತಿರುವ ಕರ್ಣಾಟಕ ಬ್ಯಾಂಕ್ - ಕರ್ನಾಟಕದ ಹೆಮ್ಮೆ.

ಸೆಪ್ಟಂಬರ್ 2017

ಪ್ರಧಾನ ಕಛೇರಿ:
ಮಹಾವೀರ ವೃತ್ತ, ಕಂಕನಾಡಿ, ಮಂಗಳೂರು - 575 002
ದೂರವಾಣಿ : 0824-2228222
ಇಮೈಲ್ : info@ktkbank.com
ಬ್ಯಾಂಕ್ ಅಂತರ್ಜಾಲ ತಾಣ : www.karnatakabank.com

TOP