ಪರಿಚಯ / ಕೃತಜ್ಞತೆಗಳು
ಗಣಿತ ಓರ್ವ ವ್ಯಕ್ತಿಯ ಜೀವನದಲ್ಲಿ ಭಾಷೆಯಷ್ಟೆ ಅವಿಭಾಜ್ಯವಾದದ್ದು. ಗಣಿತ ನಮ್ಮ ಶಿಕ್ಷಣ ಕ್ರಮದಲ್ಲಿ, ಮಕ್ಕಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮೊಳಕೆಯೊಡೆದು, ಪ್ರೌಢಶಾಲೆಯಲ್ಲಿ ಭರವಸೆ ಮೂಡುವ ಗಿಡವಾಗಿ ಬೆಳೆಯಬೇಕು. ದುರಾದೃಷ್ಟವಶಾತ್, ಇಂದು ಬಹುತೇಕ ಸಂದರ್ಭಗಳಲ್ಲಿ, ಗಣಿತಕ್ಕೂ, ವಿದ್ಯಾರ್ಥಿಗಳಿಗೂ ಎಣ್ಣೆ ಸೀಗೆ ಸಂಬಂಧ..! ಇದಕ್ಕೆ ಕಾರಣಗಳು ಹಲವಾರು. ನುರಿತ ಅಧ್ಯಾಪಕರುಗಳ ಕೊರತೆ, ಅಸಮರ್ಪಕವಾದ ಅಭ್ಯಸಿಸುವ ರೀತಿ ಮತ್ತು ಇವುಗಳಿಂದಾಗಿ ವಿದ್ಯಾರ್ಥಿಗಳ ಮನದಲ್ಲಿ ಮೂಡಬಹುದಾದ ನಿರಾಸಕ್ತಿಗಳಿಂದಾಗಿ ಗಣಿತ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ನಮ್ಮದು ಒಂದು ಕನಸು. ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರುಗಳ ಮೂಲಕ, 8, 9 ಹಾಗು 10 ನೆಯ ತರಗತಿಗಳ ಕರ್ನಾಟಕ ಪಠ್ಯಕ್ರಮಕ್ಕೆ ಅನುಗುಣವಾಗಿ, ನವೀನ ರೀತಿಯಲ್ಲಿ ದಿನನಿತ್ಯದ ಉದಾಹರಣೆಗಳ ಸಹಾಯದಿಂದ ವಿದ್ಯಾರ್ಥಿಗಳ ಮನದಲ್ಲಿ ಆಸಕ್ತಿ ಹುಟ್ಟುವಂತೆ ಮತ್ತು ವಿದ್ಯಾರ್ಥಿಗಳ ಮನಕ್ಕೆ ಮುಟ್ಟುವಂತೆ ಕಲಿಸುವ ಹಾಗು ವಿದ್ಯಾರ್ಥಿಗಳು ಯಾವಾಗ ಬೇಕಾದರೂ, ಎಷ್ಟು ಬಾರಿ ಬೇಕಾದರೂ, ವೀಕ್ಷಿಸಲು, ಆಲಿಸಲು ಮತ್ತು ಮನನ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ಆಸೆ. ಆ ಪ್ರಯತ್ನ ಇಂದು ನಿಮ್ಮ ಮುಂದೆ ಇದೆ.

ಇಲ್ಲಿ ಇರುವ ವ್ಯೆಶಿಷ್ಟ್ಯಗಳು ಅಪಾರ. ನಿಮ್ಮ ಮುಂದೆ ಬರುವ ಗಣಿತದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ನುರಿತವರು. ಉಪಯೋಗಿಸಿದ ಉದಾಹರಣೆಗಳು ನಮ್ಮ ನಿಮ್ಮ ಮುಂದೆ ಕಂಡುಬರುವ ದೈನಂದಿನ ವಿಚಾರಗಳ ಹೂರಣ. ಕೆಲವು ಕಡೆ ಶ್ರೀ. ಭಾಸ್ಕರಾಚಾರ್ಯರು(ಕ್ರಿ ಶ. 12 ನೇ ಶತಮಾನ) ರಚಿಸಿದ ಪ್ರಾಚೀನ ಭಾರತೀಯ ಗಣಿತ ಗ್ರಂಥ ’ಲೀಲಾವತಿ’ಯಿಂದ ಆಯ್ದ ಸ್ವಾರಸ್ಯಕರ ಉದಾಹರಣೆಗಳ ಉಪಯೋಗ, ಸಮಸ್ಯೆಯನ್ನು ಬಿಡಿಸಿದ ಮೇಲೆ ’ತಾಳೆ’ ನೋಡುವ ಕ್ರಮ, ’ಬ್ಯಾಂಕಿಂಗ್’ ಗೆ ಸಂಬಂಧಿಸಿದ ಪಾಠಗಳನ್ನು ಕರ್ಣಾಟಕ ಬ್ಯಾಂಕ್ ವೊಂದರ ಶಾಖೆಯೊಂದರಲ್ಲಿ ಚಿತ್ರೀಕರಣ, ಹಲವಾರು ಪ್ರಾತ್ಯಕ್ಷಿಕೆಗಳು, ಹೀಗೆ ಹಲವಾರು ವಿಷಯಗಳನ್ನು ಪಟ್ಟಿಮಾಡಬಹುದು.

ಇಲ್ಲಿ ಪಾಠಗಳ ವಿಂಗಡನೆಯು ವಿನೂತನವಾಗಿದೆ. ಪಾಠಗಳನ್ನು ತರಗತಿವಾರು (8, 9, 10 ನೆಯ ತರಗತಿ) ಅಥವಾ ವಿಷಯವಾರು ರೂಪದಲ್ಲೂ (ಬೀಜಗಣಿತ, ಅಂಕಗಣಿತ, ರೇಖಾಗಣಿತ...) ಕಲಿಯಬಹುದು. ವಿಷಯವಾರು ವಿಂಗಡನೆಯ ಸಹಾಯದಿಂದ ವಿದ್ಯಾರ್ಥಿಗಳು ಹಿಂದಿನ ತರಗತಿಗಳ ಆ ವಿಷಯಕ್ಕೆ ಸಂಬಂಧಿಸಿದ ಪಾಠಗಳನ್ನು ಸುಲಭವಾಗಿ ಹುಡುಕಿ ಪರಾಮರ್ಶೆ ಮಾಡಬಹುದು. ಪ್ರತಿ ಪಾಠದ ಆಡಿಯೋ ಮಾತ್ರವಲ್ಲದೆ, ಕನ್ನಡ ಮತ್ತು ಇಂಗ್ಲಿಷ್ ಗಳಲ್ಲಿ ಪುಸ್ತಕ(ಟೆಕ್ಸ್ಟ್) ರೂಪದಲ್ಲೂ ಲಭ್ಯ. ಭವಿಷ್ಯದಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಕನ್ನಡ ಪುಸ್ತಕದಲ್ಲಿ ಸಮಾಂತರ ಆಂಗ್ಲ ಪದಗಳನ್ನು ಸಹ ಒದಗಿಸಲಾಗಿದೆ.

ಇವೆಲ್ಲದರ ಜೊತೆಯಲ್ಲಿ, ಪ್ರತಿಯೊಬ್ಬ ನಾಗರೀಕನಿಗೂ ತಿಳಿದಿರಬೇಕಾದ ಗ್ರಾಹಕನ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಕಾಯಿದೆ, ವಿದ್ಯುತ್ ಮತ್ತು ನೀರಿನ ಮಿತಬಳಕೆ, ಜಾಗತಿಕ ತಾಪಮಾನದ ಏರಿಕೆ, ಪರಿಸರ ಮಾಲಿನ್ಯ, ಕಂಪ್ಯೂಟರ್ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ಸಂಕ್ಷಿಪ್ತ ಪರಿಚಯಗಳೂ ಅಡಕವಾಗಿವೆ.

ನಮ್ಮ ಪ್ರಯತ್ನದ ಸಾರ್ಥಕ್ಯವಿರುವುದು ನಿಮ್ಮ ಸಾಧನೆಯ ಯಶಸ್ಸಿನಲ್ಲಿ. ಆ ನಿಟ್ಟಿನಲ್ಲಿ, ನಿಮ್ಮ ಯಾವುದೇ ಅನಿಸಿಕೆ, ಆಕ್ಷೇಪಗಳನ್ನು ನಾವು ಸ್ವಾಗತಿಸುತ್ತೇವೆ. ಬರೆಯ ಬೇಕಾದ ವಿಳಾಸ ಇಮೈಲ್: Freeganita@gmail.com

ಬನ್ನಿ, ’ಪ್ರಸ್ತಾವನೆ’ಯನ್ನು ಆಲಿಸೋಣ/ನೋಡೋಣ ( ಇಲ್ಲಿ ಕ್ಲಿಕ್ಕಿಸಿ).


ಕೃತಜ್ಞತೆಗಳು

 
 
 
 

 
 
 
 


 
 
 
 
 
 
ಇವರೆಲ್ಲರ ಸಹಕಾರ ಈ ಡಿವಿಡಿ ಗೆ ಇದೆ.

TOP