4.12 ಬಾಡಿಗೆ ಕೊಳ್ಳುವಿಕೆ ಮತ್ತು ಕಂತಿನ ಖರೀದಿ (Hire Purchase and Installment scheme)

 

ಮುಂದೆ, ನೀವು ಬೆಳೆದ ನಂತರ ಒಂದು ಕಾರ್ಖಾನೆಯನ್ನು ಸ್ಥಾಪಿಸಲು ಬಯಸುತ್ತೀರೆಂದು ಊಹಿಸಿ. ಅದಕ್ಕೆ ಕೆಲವು ಯಂತ್ರೋಪಕರಣಗಳು ಬೇಕು. ಒಂದು ಮುಖ್ಯ ಯಂತ್ರದ ಬೆಲೆ 1ಲಕ್ಷ ರೂ.ಗಳೆಂದು ಊಹಿಸಿ. ಆದರೆ ನಿಮ್ಮಲ್ಲಿ ಕೆಲವೇ ಸಾವಿರ ರೂಪಾಯಿಗಳಿವೆ ಮತ್ತು ನಿಮಗೆ ಕಾರ್ಖಾನೆ ನಡೆಸುವ ಮತ್ತು ಇತರ ಖರ್ಚುಗಳೂ ಇವೆ. ಹಾಗಾದರೆ ಆ ಯಂತ್ರವನ್ನು ಪಡೆಯುವುದು ಹೇಗೆ? ಅದಕ್ಕಾಗಿ ಹಣ ಹೊಂದಿಸಿಕೊಳ್ಳಲು ಕೆಲವು ಮಾರ್ಗಗಳಿವೆ.

 

1.      ಸ್ನೇಹಿತರಿಂದ/ಬಂಧುಗಳಿಂದ/ಪರಿಚಯದವರಿಂದ ಹಣ ಪಡೆಯುವುದು

2.      ಬ್ಯಾಂಕಿನಿಂದ ಸಾಲ ಪಡೆಯುವುದು.

3.      ಬಾಡಿಗೆ ಕೊಳ್ಳುವಿಕೆ. ಎನ್ನುವ ಹೊಸ ಮಾರ್ಗ

 

ಬಾಡಿಗೆ ಕೊಳ್ಳುವಿಕೆ ಯೋಜನೆಯನ್ನು ಕೆಲವು ಸಂಸ್ಥೆಗಳು ನಡೆಸುತ್ತವೆ.

ಬ್ಯಾಂಕುಗಳಂತೆಯೇ ಇಲ್ಲಿಯೂ ಕೂಡಾ ನೀವು ಅಂತಹ ಸಂಸ್ಧೆಯೊಂದಿಗೆ ಬಾಡಿಗೆ ಕೊಳ್ಳುವಿಕೆ ಕರಾರಿಗೆ ಒಳಪಡಬೇಕಾಗುತ್ತದೆ. ಇಲ್ಲಿ ವಸ್ತುಗಳನ್ನು ಮಾರಾಟ ಮಾಡುವವನು ವಿಕ್ರಯದಾರ [Vendor(seller)] ನೀವು (ಕೊಳ್ಳುವವರು) ಬಾಡಿಗೆದಾರ (borrower).

ಬಾಡಿಗೆ ಖರೀದಿಯ ಕೆಲವು ಮುಖ್ಯ ಲಕ್ಷಣಗಳು:

 

1.      ಬಾಡಿಗೆದಾರನು ಒಪ್ಪಂದಕ್ಕೆ ಒಳಪಟ್ಟ ದಿನವೇ ವಿಕ್ರಯದಾರನಿಗೆ ಸ್ವಲ್ಪ ಹಣ (ಉದಾ 10%). ಆರಂಭಿಕ ಪಾವತಿ (down payment) ಮಾಡಬೇಕು.

2.      ಬಾಡಿಗೆದಾರನು ಬಾಕಿ ಹಣವನ್ನು ಕಾಲ ಕಾಲಕ್ಕೆ ಕಂತಿನ ಮೂಲಕ ತೀರಿಸುವಂತೆ ಒಪ್ಪಂದಕ್ಕೆ ಬರಬೇಕು (ಮಾಸಿಕ, ತ್ರೈ ಮಾಸಿಕ, ವಾರ್ಷಿಕ ಕಂತುಗಳು) (ಉದಾ: ರೂ.10,000 ದಂತೆ 12 ಕಂತುಗಳು)

3.      ಕೊನೆಯ ಕಂತನ್ನು ಕಟ್ಟುವವರೆಗೂ ಪಡೆದ ವಸ್ತುವನ್ನು (ಯಂತ್ರ,ವಾಹನ), ಬಾಡಿಗೆದಾರನು ಇತರರಿಗೆ ಮಾರತಕ್ಕದ್ದಲ್ಲ, ಹಾಳು ಮಾಡತಕ್ಕದ್ದಲ್ಲ, ಗಿರವಿ ಇಡಲಿಕ್ಕಿಲ್ಲ.

4.      ಎಲ್ಲ ಕಂತುಗಳೂ ತೀರಿದ ಬಳಿಕವೇ ವಸ್ತು ಬಾಡಿಗೆದಾರನ ಒಡೆತನಕ್ಕೆ ಬರುತ್ತದೆ.

5.      ಬಾಡಿಗೆದಾರನು ಕಂತನ್ನು ಕಟ್ಟಲು ತಪ್ಪಿದರೆ, ವಿಕ್ರಯದಾರನು ಸರಕನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಅಧಿಕಾರವಿರುತ್ತದೆ.

 

ಪೂರ್ತಿ ಹಣ ಪಾವತಿ ಮಾಡದ ಕಾರಣದಿಂದ, ವಿಕ್ರಯದಾರನು ಸರಕನ್ನು ವಶ ಪಡಿಸಿಕೊಂಡರೆ, ಅದನ್ನು ಮರುಸ್ವಾಧೀನ ಎಂದು ಕರೆಯುವವರು. ಹೀಗೆ ಮರುಸ್ವಾಧೀನ ಪಡಕೊಂಡ ಮೇಲೆ, ಬಾಡಿಗೆದಾರನು ತಾನು ಕಟ್ಟಿದ ಕಂತಿನ ಹಣವನ್ನು ವಾಪಾಸು ಕೇಳುವಂತಿಲ್ಲ, ಅವನು ಮುಂಚೆ ಕಟ್ಟಿದ ಕಂತುಗಳನ್ನು ಬಾಡಿಗೆ ಎಂದು ಪರಿಗಣಿಸಲಾಗುತ್ತದೆ.

ವಿಕ್ರಯದಾರನು ವಸ್ತುವನ್ನು ಬಾಡಿಗೆ ಕರಾರಿನಲ್ಲಿ ಕೊಟ್ಟಾಗ, ಅದು ಹಣವನ್ನು ಸಾಲಕೊಟ್ಟಂತೆಯೇ. ಕಂತಿನ ಹಣದಲ್ಲಿ ಬಡ್ಡಿಯೂ ಸೇರಿರುತ್ತದೆ. ಆದ್ದರಿಂದ ಕಂತಿನ ಹಣದಲ್ಲಿ ಎರಡು ಭಾಗಗಳಿರುತ್ತವೆ. ದೊಡ್ಡ ಭಾಗ ಸಾಲದ್ದು, ಚಿಕ್ಕ ಭಾಗ - ಬಡ್ಡಿಯದ್ದು.

 

ಮೇಲಿನ ನಿಮ್ಮ ಉದಾಹರಣೆಯಲ್ಲಿ:

ಒಟ್ಟು ಸಾಲ ಪಡೆದದ್ದು = ರೂ.1,00,000(ಯಂತ್ರದ ಕ್ರಯ) ಆರಂಭಿಕ ಹಣ 10,000 (10%) ಇರಲಿ

ಕಂತುಗಳಲ್ಲಿ ಒಟ್ಟು ತೀರಿಸಿದ ಹಣ = ಕಂತಿನ ಹಣ*ಕಂತುಗಳ ಸಂಖ್ಯೆ = 10,000*12 = 1,20,000

ವಿಕ್ರಯದಾರನಿಗೆ ಪಾವತಿಸಿದ ಒಟ್ಟು ಹಣ = ಆರಂಭಿಕ ಪಾವತಿ+ ಒಟ್ಟು ಕಂತುಗಳಲ್ಲಿ ಕಟ್ಟಿದ ಹಣ = 10,000+1,20,000= 1,30,000 ರೂ.

1,00,000ೂ. ಸಾಲಕ್ಕೆ ವಿಕ್ರಯದಾರನಿಗೆ 30,000 ರೂ. ಜಾಸ್ತಿ ಕೊಟ್ಟಂತಾಯಿತು. ಆದ್ದರಿಂದ ಈ 30,000 ರೂ. ಗಳನ್ನು ಬಡ್ಡಿ ಎಂದು ಪರಿಗಣಿಸಬಹುದು.

 

4.12.1. ಕಂತಿನ ಖರೀದಿ (Installment Scheme)

 

4.12 ಉದಾಹರಣೆ:

 

ನಿಮ್ಮ ಮನೆಯವರು 30,000 ರೂ. ಬೆಲೆಯ ಟಿ.ವಿ.ಯನ್ನು ಕೊಳ್ಳಲು ಬಯಸುತ್ತಾರೆಂದು ಊಹಿಸಿ. ಪೂರ್ತಿ ಹಣವನ್ನು ಒಂದೇ ಸಾರಿ ಕೊಡುವ ಬದಲು ಬೆಲೆಯನ್ನು ಕಂತಿನಲ್ಲಿ(ಮಾಸಿಕ ಕಂತುಗಳು) ಕೊಡಲು ಬಯಸುತ್ತಾರೆ. ವಸ್ತುಗಳನ್ನು ಈ ವಿಧದಲ್ಲಿ ಕೊಳ್ಳುವುದನ್ನು ಕಂತಿನ ಖರೀದಿ ಎನ್ನುವರು. ಈ ಯೋಜನೆಯನ್ನು ವಸ್ತುಗಳ ಮಾರಾಟಗಾರರೇ ನಡೆಸುತ್ತಾರೆ.ಈ ಯೋಜನೆಯಲ್ಲಿ ಕೊಳ್ಳುವವನು ಸ್ವಲ್ಪ ಹಣ ಆರಂಭಿಕ ಪಾವತಿಮಾಡಿ, ಉಳಿದ ಹಣವನ್ನು ಸಮಾನ ಕಂತಿನಲ್ಲಿ ಪಾವತಿ ಮಾಡಿದ ತಕ್ಷಣ, ವಸ್ತುವು ಕೊಳ್ಳುವವನ ವಶಕ್ಕೆ ಬರುತ್ತದೆ.(ಟಿ.ವಿ. ನಿಮ್ಮ ಸ್ವಾಧೀನಕ್ಕೆ ಬರುತ್ತದೆ)ಕೊಳ್ಳುವವನು ಕಂತುಗಳನ್ನು ಪಾವತಿ ಮಾಡಲು ತಪ್ಪಿದರೆ, ಮಾರುವವನು ವಸ್ತುವನ್ನು ಮರುಸ್ವಾಧೀನ ಪಡೆಯಲು ಆಗುವುದಿಲ್ಲ. ಅವನು ನ್ಯಾಯಾಲಕ್ಕೇ ಹೋಗಬೇಕು.ಅದಕ್ಕಾಗಿ ಟಿ.ವಿ. ಅಂಗಡಿಯವರು, ನಿಮ್ಮಿಂದ ಮುಂದಿನ ದಿನಾಂಕದ ಚೆಕ್ಕುಗಳನ್ನು ಪಡೆದು ಕೊಳ್ಳುತ್ತಾರೆ. ಏಕೆಂದರೆ ಚೆಕ್ ತಿರಸ್ಕತವಾದರೆ ಕೋರ್ಟಿಗೆ ಹೋಗುವುದು ಸುಲಭ ಮತ್ತು ಚೆಕ್ ಕೊಟ್ಟವವನನ್ನು ಈ ಸಂಬಂಧ ಜೈಲಿಗೆ ಕಳಿಸಬಹುದು.

 

ಆರಂಭದಲ್ಲಿ ಟಿ.ವಿ. ಅಂಗಡಿಯವರು ನಿಮ್ಮಿಂದ ಪೂರ್ತಿಹಣ (30,000ರೂ.) ಪಡೆದಿರುವುದಿಲ್ಲ. ಆದ್ದರಿಂದ,ಆರಂಭಿಕ ಹಣ ಬಿಟ್ಟು ಉಳಿದ ಹಣವು, ನೀವು ಅವರಿಂದ ಸಾಲ ಪಡದಂತೆ ಆಗಿರುತ್ತದೆ.

ಕಂತಿನ ವ್ಯಾಪಾರದಲ್ಲಿ ಬಡ್ಡಿಯ ದರವನ್ನು ಕಂಡುಹಿಡಿಯುವ ಸೂತ್ರ:

 

R% = 2400*E/ N[(N+1)*I -2*E]

ಇಲ್ಲಿ

R: ಬಡ್ಡಿಯ ದರ

E: ಹೆಚ್ಚಿಗೆ ಕೊಟ್ಟ ಹಣ (ಕೊಟ್ಟ ಒಟ್ಟು ಹಣ - ವಸ್ತುವಿನ ಬೆಲೆ)

I: ಕಂತಿನ ಹಣ.

N: ಕಂತುಗಳ ಸಂಖ್ಯೆ.

 

ಮೇಲಿನ ಉದಾಹರಣೆಯಲ್ಲಿ ನಿಮ್ಮ ಮನೆಯವರು 1000 ರೂ. ಆರಂಭಿಕ ಪಾವತಿ ಮಾಡಿ. 1000 ರೂ. ಗಳ 35 ಮಾಸಿಕ ಕಂತುಗಳಲ್ಲಿ ತೀರಿಸುತ್ತಾರೆಂದು ಊಹಿಸಿ. ಬಡ್ಡಿಯ ದರವನ್ನು ಲೆಕ್ಕಹಾಕಿ.

 

ಟಿ.ವಿ.ಯ ಕ್ರಯ = 30,000 ರೂ

ಆರಂಭಿಕ ಪಾವತಿ = 1,000 ರೂ

ಕಂತುಗಳಲ್ಲಿ ಪಾವತಿ ಮಾಡುವ ಒಟ್ಟು ಹಣ = ಕಂತಿನ ಹಣ*ಕಂತುಗಳು = 1000*35 = 35,000 ರೂ

ಟಿ.ವಿ.ಗೆ ಕೊಟ್ಟ ಒಟ್ಟು ಹಣ = ಆರಂಭಿಕ ಪಾವತಿ + ಕಂತುಗಳಲ್ಲಿ ಕೊಟ್ಟ ಹಣ = 1000+35,000 = 36,000 ರೂ

ಹೆಚ್ಚಿಗೆ ಕೊಟ್ಟ ಹಣ = ಕೊಟ್ಟ ಒಟ್ಟು ಹಣ - ಟಿ.ವಿ.ಯ ಕ್ರಯ = 36,000-30,000 = 6000 ರೂ

ಈಗ ನಾವು ಸೂತ್ರ ಉಪಯೋಗಿಸಿ ಬಡ್ಡಿಯ ದರವನ್ನು ಕಂಡುಹಿಡಿಯುವಾ

E= 6000

I =1000

N=35

 

R = 2400*6000/ 35(36*1000 -2*6000)

= 2400*6000/ 35*24000 = 17.14%

 

ಚಟುವಟಿಕೆ:

ಬೇರೆ ಬೇರೆ ಟಿ.ವಿ. ಅಂಗಡಿಗಳಿಗೆ ಭೇಟಿ ಕೊಟ್ಟ ಅಲ್ಲಿನ ಕಂತಿನ ಖರೀದಿ ಯೋಜನೆಯ ವಿವರಗಳನ್ನು ತಿಳಿಯಿರಿ. ಗಣಿತವನ್ನು ನಿಮ್ಮ ಜೀವನದಲ್ಲಿ ಹೀಗೆ ಉಪಯೋಗಿಸಿ, ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಕಂತಿನ ವ್ಯವಹಾರದ ಬಗ್ಗೆ ಸರಿಯಾದ ತಿಳುವಳಿಕೆ ಕೊಟ್ಟು, ಹಣವನ್ನು ಹೇಗೆ ಉಳಿಸಬಹುದೆಂದು ತಿಳಿಸಿ, ಅವರಿಂದ ಬಹುಮಾನವನ್ನು ಗಿಟ್ಟಿಸಿ.

 

 

4.12 ಕಲಿ ಾರಾಂಶ

 

 

ಸಂಖ್ಯೆ

ಕಲಿತ ಮುಖ್ಯಾಂಶಗಳು

1

ಬಾಡಿಗೆ ಖರೀದಿ, ಕಂತಿನ ವ್ಯವಹಾರ.

2

R = ಬಡ್ಡಿಯದರ, E = ಹೆಚ್ಚಿಗೆ ಕೊಟ್ಟ ಹಣ, I = ಕಂತಿನ ಹಣ,N = ಕಂತುಗಳ ಸಂಖ್ಯೆ ಆದಾಗ,

R = 2400*E/ n[(n+1)*I -2*E]